ಉಡುಪಿ: ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರ ಕಚೇರಿಗೆ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ಟಿಕರ್ ಅಂಟಿಸುವುದಾಗಿ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಶಾಸಕ ಕಚೇರಿ ಎದುರು ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ಕಚೇರಿಗೆ ನುಗ್ಗದಂತೆ ತಡೆಯುವ ಉದ್ದೇಶದಿಂದ ಬಿಜೆಪಿ ಕಾರ್ಯಕರ್ತರು ಕಚೇರಿ ಆವರಣದಲ್ಲಿ ಜಮಾಯಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಬಿಜೆಪಿ ಮುಖಂಡ ಸತೀಶ್ ಶೆಟ್ಟಿ ಮುಟ್ಲಪಾಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಬಯಲಿಗೆಳೆದಿರುವ ಶಾಸಕ ಸುನಿಲ್ ಕುಮಾರ್ ಅವರ ರಾಜ್ಯಮಟ್ಟದ ನಾಯಕತ್ವದಿಂದ ಕಾರ್ಕಳದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ಹೇಳಿದರು.
ಹತಾಶೆಯಿಂದ ಕಾಂಗ್ರೆಸ್ ನಾಯಕರು ವಿವಿಧ ರೀತಿಯ ಷಡ್ಯಂತ್ರಗಳಿಗೆ ಮುಂದಾಗಿದ್ದು, ಅದರ ಭಾಗವಾಗಿಯೇ ಶಾಸಕರ ಕಚೇರಿಗೆ ಪೋಸ್ಟರ್ ಅಂಟಿಸುವ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಪೋಸ್ಟರ್ ಅಂಟಿಸುವ ಸವಾಲು ಹಾಕಿದ ಕಾಂಗ್ರೆಸ್ ನಾಯಕರಿಗೆ ಪ್ರತಿಯಾಗಿ ಇಂದು ನೂರಾರು ಬಿಜೆಪಿ ಕಾರ್ಯಕರ್ತರು ಎದೆಯೊಡ್ಡಿ ನಿಂತಿದ್ದಾರೆ ಎಂದರು.
ಆದರೆ ಕಾಂಗ್ರೆಸ್ ನಾಯಕರು ತಿಳಿಸಿದ ಸಮಯಕ್ಕೆ ಒಬ್ಬನೇ ಒಬ್ಬ ಕಾರ್ಯಕರ್ತ ಕೂಡ ಸ್ಥಳಕ್ಕೆ ಬಂದಿಲ್ಲ. ಇದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೀನಾಯ ಸೋಲಿಗೆ ಸಾಕ್ಷಿಯಾಗಿದೆ ಎಂದು ವ್ಯಂಗ್ಯವಾಡಿದರು.
ತೆರೆಮರೆಯಲ್ಲಿ ಹೇಳಿಕೆಗಳನ್ನು ನೀಡಿ ಕಾರ್ಯಕರ್ತರನ್ನು ಪ್ರಚೋದಿಸುವ ಕೆಲಸ ಮಾಡಲಾಗುತ್ತಿದೆ. ಶಾಸಕ ಸುನಿಲ್ ಕುಮಾರ್ ಅವರ ಕಾರ್ಯವೈಖರಿ ಮತ್ತು ಜನಪ್ರಿಯತೆಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೆ ಕಾಂಗ್ರೆಸ್ ನಾಯಕರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಕಳದ ಕಾಂಗ್ರೆಸ್ ನಾಯಕರು ದೃತಿಗೆಟ್ಟು, ಮತಿಗೆಟ್ಟು ನಿರಾಧಾರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸತೀಶ್ ಶೆಟ್ಟಿ ಮುಟ್ಲಪಾಡಿ ಟೀಕಿಸಿದರು.

