Wednesday, September 2, 2026

ಅಕ್ಕಿ ದಾಸ್ತಾನು ಆರೋಪ: ಗುಜರಿ ವ್ಯಾಪಾರಿಗೆ ಬೆದರಿಕೆ, ಹಣಕ್ಕೆ ಬೇಡಿಕೆ- ಕಾಂಗ್ರೆಸ್ ಮುಖಂಡ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Must read

ಉಡುಪಿ: ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವುದಾಗಿ ಆರೋಪಿಸಿ ಗುಜರಿ ವ್ಯಾಪಾರಿಯೊಬ್ಬರಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇರೆಗೆ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಸೇರಿದಂತೆ ಮೂವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಂದ್ರ ಪುತ್ರನ್, ಸಚಿನ್ ಹಾಗೂ ಪ್ರದೀಪ್ ಅಲಿಯಾಸ್ ಎಸ್‌ಟಿಡಿ ಪ್ರದೀಪ್ ವಿರುದ್ಧ ದೂರು ದಾಖಲಾಗಿದೆ.
ಆ.31ರಂದು ಬೆಳಿಗ್ಗೆ 11.30ರ ಸುಮಾರಿಗೆ ಸಚಿನ್ ಎಂಬಾತ ಗುಜರಿ ವ್ಯಾಪಾರಿಗೆ ಕರೆ ಮಾಡಿ, ಮನೆಯ ಅಂಗಳದಲ್ಲಿ ಎರಡು ಚೀಲ ಅಕ್ಕಿ ಇರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಬಳಿಕ ವ್ಯಾಪಾರಿ ಮನೆಗೆ ತೆರಳಿದಾಗ ಸಚಿನ್ ಆಟೋರಿಕ್ಷಾದಲ್ಲಿ ಹಾಗೂ ನಾಗೇಂದ್ರ ಪುತ್ರನ್ ಮತ್ತು ಪ್ರದೀಪ್ ಬೈಕ್‌ನಲ್ಲಿ ಅಲ್ಲಿಗೆ ಬಂದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾಗೇಂದ್ರ ಪುತ್ರನ್ ತಾನು ಸಾಮಾಜಿಕ ಕಾರ್ಯಕರ್ತ ಎಂದು ಪರಿಚಯಿಸಿಕೊಂಡು, ಮನೆಯ ಅಂಗಳದಲ್ಲಿದ್ದ ಅಕ್ಕಿ ಚೀಲಗಳ ದೃಶ್ಯವನ್ನು ಚಿತ್ರೀಕರಿಸಿರುವುದಾಗಿ ಹೇಳಿದ್ದಾನೆ. ಸರ್ಕಾರಿ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಕುರಿತು ದೂರು ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದಿಂದ ತಪ್ಪಿಸಿಕೊಳ್ಳಬೇಕಾದರೆ ₹2 ಲಕ್ಷ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಣ ನೀಡಲು ಸಾಧ್ಯವಿಲ್ಲ ಎಂದು ವ್ಯಾಪಾರಿ ತಿಳಿಸಿದಾಗ ಅವಾಚ್ಯವಾಗಿ ನಿಂದಿಸಿ, ಬಳಿಕ ₹1 ಲಕ್ಷ ನೀಡಬೇಕು. ಇಲ್ಲವಾದರೆ ಜನರು ಹಾಗೂ ತನ್ನ ಹುಡುಗರನ್ನು ಕರೆಸಿ ಹೊಡೆದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಧ್ಯಾಹ್ನ 2.45ರವರೆಗೂ ಹಣ ನೀಡದೆ ಸ್ಥಳದಿಂದ ತೆರಳುವುದಿಲ್ಲ ಎಂದು ಆರೋಪಿ ಪಟ್ಟು ಹಿಡಿದಿದ್ದ ಎನ್ನಲಾಗಿದೆ. ಈ ವೇಳೆ ದೂರುದಾರರ ಮಕ್ಕಳು ಸ್ಥಳಕ್ಕೆ ಬಂದ ಬಳಿಕ ಆರೋಪಿಗಳು ಅವಾಚ್ಯವಾಗಿ ನಿಂದಿಸಿ ಸ್ಥಳದಿಂದ ತೆರಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರುದಾರರು ನೀಡಿದ ದೂರಿನ ಆಧಾರದಲ್ಲಿ ಕೋಟ ಪೊಲೀಸರು ಬೆದರಿಕೆ, ಹಣಕ್ಕೆ ಬೇಡಿಕೆ ಹಾಗೂ ಇತರ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here