Friday, August 28, 2026

ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಪ್ರಕರಣ: ನಾಲ್ವರಿಗೆ ಶಿಕ್ಷೆ

Must read

ಉಡುಪಿ: ಏಳು ವರ್ಷಗಳ ಹಿಂದೆ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿರುವ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪಿಗಳಿಗೆ ವಿವಿಧ ಪ್ರಕರಣಗಳಡಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಅವರು ಆ.27ರಂದು ತೀರ್ಪು ಪ್ರಕಟಿಸಿದರು.
ಅಲೆವೂರು ಗ್ರಾಮದ ಪ್ರಗತಿ ನಗರದ ನಿವಾಸಿ ಪಂಜಿಮಾ ಅವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದರು. ಅವರ ಮನೆಯ ಪಕ್ಕದಲ್ಲೇ ಆರೋಪಿಗಳಾದ ಶೋಭಾ ಮತ್ತು ಆಕೆಯ ಮಗಳು ಚೈತ್ರಾ ಕೂಡ ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದರು. ಶೋಭಾ ಅವರ ಸ್ನೇಹಿತ ಭಾಸ್ಕರ ಶೆಟ್ಟಿ ಹಾಗೂ ಚೈತ್ರಾ ಅವರ ಸ್ನೇಹಿತ ಭರತ್ ಗಾಣಿಗ ಪ್ರಕರಣದ ಇತರ ಆರೋಪಿಗಳಾಗಿದ್ದರು.
ಶೋಭಾ ಮತ್ತು ಚೈತ್ರಾ ಅವರು ಪಂಜಿಮಾ ಅವರನ್ನು ಪದೇಪದೇ ಜಾತಿ ನಿಂದನೆ ಮಾಡಿ ಬೈಯುತ್ತಿದ್ದರು. ಅಲ್ಲದೆ, ಅವರ ಮನೆಯ ಮುಂದೆ ತ್ಯಾಜ್ಯ ವಸ್ತುಗಳು, ಕೋಳಿ ಮಾಂಸದ ಮೂಳೆಗಳು ಹಾಗೂ ಅಮಲು ಪದಾರ್ಥಗಳ ಬಾಟಲಿಗಳನ್ನು ಎಸೆಯುತ್ತಿದ್ದರು. ಇದನ್ನು ಪಂಜಿಮಾ ಆಕ್ಷೇಪಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡುತ್ತಿದ್ದರು ಎಂದು ದೂರಲಾಗಿತ್ತು.
2019ರ ಡಿ.2ರಂದು ಬೆಳಿಗ್ಗೆ 8ರ ಸುಮಾರಿಗೆ ಹಾಗೂ ಡಿ.3ರಂದು ಬೆಳಿಗ್ಗೆ 9ರ ಸುಮಾರಿಗೆ ಇದೇ ರೀತಿ ಜಾತಿ ನಿಂದನೆ ಮಾಡುತ್ತಿದ್ದಾಗ ಪಂಜಿಮಾ ಆಕ್ಷೇಪಿಸಿದ್ದರು. ಈ ಸಂದರ್ಭ ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗ ಅವರು ಪಂಜಿಮಾ ಹಾಗೂ ಅವರ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಈ ಕುರಿತು ಪಂಜಿಮಾ ಅವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನ ಡಿವೈಎಸ್ಪಿ ಟಿ.ಆರ್. ಜಯಶಂಕರ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಕಲಂಗಳಡಿ ಆರೋಪಪಟ್ಟಿ ಸಲ್ಲಿಸಿದ್ದರು.
ವಿವಿಧ ಕಲಂಗಳಡಿ ಶಿಕ್ಷೆ: ಭಾರತೀಯ ದಂಡ ಸಂಹಿತೆ ಕಲಂ 504 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ಕಲಂ 3(1)(ಆರ್) ಅಡಿ ನಾಲ್ವರು ಆರೋಪಿಗಳಿಗೆ ತಲಾ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ₹1,000 ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದರೆ 15 ದಿನಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಅದೇ ರೀತಿ, ಭಾಸ್ಕರ ಶೆಟ್ಟಿ ಮತ್ತು ಭರತ್ ಗಾಣಿಗ ಅವರಿಗೆ ಭಾರತೀಯ ದಂಡ ಸಂಹಿತೆ ಕಲಂ 506 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ಸಂಬಂಧಿತ ಕಲಂಗಳಡಿ ತಲಾ ಒಂಬತ್ತು ತಿಂಗಳ ಸಾದಾ ಶಿಕ್ಷೆ ಮತ್ತು ₹2,000 ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದರೆ 30 ದಿನಗಳ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಎಸ್‌ಸಿ/ಎಸ್‌ಟಿ ಕಾಯ್ದೆಯ ಇತರ ವಿವಿಧ ಕಲಂಗಳಡಿ ನಾಲ್ವರು ಆರೋಪಿಗಳಿಗೆ ತಲಾ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ₹1,000 ದಂಡವನ್ನೂ ನ್ಯಾಯಾಲಯ ವಿಧಿಸಿದೆ. ದಂಡ ಪಾವತಿಸಲು ವಿಫಲರಾದಲ್ಲಿ ತಲಾ 15 ದಿನಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಆರೋಪಿಗಳಿಂದ ವಸೂಲಾಗುವ ದಂಡದ ಮೊತ್ತದಲ್ಲಿ ₹15,000 ಅನ್ನು ಪಿರ್ಯಾದಿದಾರರಾದ ಪಂಜಿಮಾ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

spot_img

More articles

LEAVE A REPLY

Please enter your comment!
Please enter your name here