Monday, August 24, 2026

ಡೇವಿಡ್ ಡಿಸೋಜಾ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

Must read

ಉಡುಪಿ: ಕಾಪು ತಾಲ್ಲೂಕಿನ ಮುದರಂಗಡಿ ಸೇಂಟ್ ಕ್ಸೇವಿಯರ್ ಚರ್ಚ್‌ ಕಾಂಪ್ಲೆಕ್ಸ್‌ನಲ್ಲಿ ಪ್ರಿನ್ಸ್ ಎಂಟರ್‌ಪ್ರೈಸಸ್ ಮಾಲೀಕ ಡೇವಿಡ್ ಡಿಸೋಜಾ ಅವರನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಬೈಂದೂರು ತಾಲ್ಲೂಕಿನ ಯಡ್ತರೆ ಗ್ರಾಮದ ಹುದಾರ ಹೌಸ್ ನಿವಾಸಿ ಲೋಕೇಶ್ ತೇಜ ಕೊಠಾರಿ (42) ಬಂಧಿತ ಆರೋಪಿ.
ಆಗಸ್ಟ್ 7ರಂದು ಮಧ್ಯಾಹ್ನ 3.45ರ ಸುಮಾರಿಗೆ ಮೋಟಾರ್‌ಸೈಕಲ್‌ನಲ್ಲಿ ಬಂದಿದ್ದ ಆರೋಪಿಗಳ ಪೈಕಿ ಸಹಸವಾರ ಡೇವಿಡ್ ಡಿಸೋಜಾ ಅವರ ತಲೆಗೆ ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದಲ್ಲಿ ಈಗಾಗಲೇ ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ವಾಜುಲ್ ಶೇಖ್ ಅಲಿಯಾಸ್ ದೀಪಕ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಲ್ಲದೆ, ಕೊಲೆಗೆ ಅಪರಾಧಿಕ ಒಳಸಂಚು ರೂಪಿಸಿ ಹಣಕಾಸು ನೆರವು ನೀಡಿದ ಆರೋಪದಡಿ ಮೊಹಮ್ಮದ್ ಇರ್ಷಾದ್, ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ರಾಮ ಪೂಜಾರಿ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ಮೊದಲ ಆರೋಪಿ ರಾಜು ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರ ಮೇಲೆ ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣವಿದ್ದು, ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಲೋಕೇಶ್ ತೇಜ ಕೊಠಾರಿ ಈ ಹಿಂದೆ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪ್ರಕರಣದ ಆರೋಪಿ ಕಿಶೋರ್ ರಾಮ ಪೂಜಾರಿ ಪರಿಚಯವಾಗಿ ಸ್ನೇಹ ಬೆಳೆದಿತ್ತು ಎನ್ನಲಾಗಿದೆ. ಬಳಿಕ ಅನ್ಮೋಲ್ ರಸ್ತೋಗಿ ಹಾಗೂ ರಾಜು ಅವರಿಗೆ ಕೃತ್ಯಕ್ಕೆ ಬಳಸಿದ ಮೋಟಾರ್‌ಸೈಕಲ್‌ಗಳನ್ನು ಒದಗಿಸಿ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಅಪರಾಧಿಕ ಒಳಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ–ಪಡುಬಿದ್ರೆ ಪೊಲೀಸರು ಲೋಕೇಶ್‌ನನ್ನು ಬೈಂದೂರಿನ ಯಡ್ತರೆಯಲ್ಲಿ ವಶಕ್ಕೆ ಪಡೆದು ತನಿಖಾಧಿಕಾರಿ ಮುಂದೆ ಹಾಜರುಪಡಿಸಿದ್ದರು. ಶುಕ್ರವಾರ (ಆ.21) ಆತನನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ಆತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್‌ಗಳು ಹಾಗೂ ಮೋಟಾರ್‌ಸೈಕಲ್‌ನ ಎಂಜಿನ್ ಮತ್ತು ಚಾಸಿಸ್ ನಂಬರ್‌ಗಳನ್ನು ಅಳಿಸಲು ಬಳಸಿದ್ದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

spot_img

More articles

LEAVE A REPLY

Please enter your comment!
Please enter your name here