Tuesday, September 17, 2024

ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Must read

ಉಡುಪಿ: ನಾಯಿಗಳ ಸಂತಾನಹರಣ ಶಸ್ತçಚಿಕಿತ್ಸೆ ಹಾಗೂ ರೇಬೀಸ್ ಲಸಿಕೆ ನೀಡುವ ಕಾರ್ಯಗಳನ್ನು ಪಶುವೈದ್ಯಾಧಿಕಾರಿಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳು ಕಚ್ಚುವ ದೂರು ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚು ಕೇಳಿ ಬರುತ್ತಿವೆ. ಮಣಿಪಾಲ ವ್ಯಾಪ್ತಿಯಲ್ಲಿ 75 ಕ್ಕೂ ಹೆಚ್ಚು ಬೀದಿ ನಾಯಿ ಕಡಿತವಾಗಿರುವ ಪ್ರಕರಣಗಳಾಗಿವೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಸ್ತç ಚಿಕಿತ್ಸೆ ಪ್ರಮುಖ ಅಸ್ತ್ರವಾಗಿದ್ದು, ಇವುಗಳ ಅನುಷ್ಠಾನವನ್ನು ಸ್ಥಳೀಯ ಸಂಸ್ಥೆಗಳು, ನಗರಸಭೆ, ಗ್ರಾಮ ಪಂಚಾಯತ್ ಹಾಗೂ ಪಶುವೈದ್ಯಾಧಿಕಾರಿಗಳು ಮಾಡಬೇಕು. ಸಾಕು ನಾಯಿಗಳ ಮಾಲೀಕರು ರೇಬೀಸ್ ಚುಚ್ಚುಮದ್ದುಗಳನ್ನು ತಪ್ಪದೇ ತಮ್ಮ ನಾಯಿಗಳಿಗೆ ಹಾಕಿಸಬೇಕು ಎಂದರು.

ಎ.ಬಿ.ಸಿ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಳನ್ನು 2020-21 ನೇ ಸಾಲಿನಲ್ಲಿ 2536, 21-22 ರಲ್ಲಿ 5418, 2022-23 ರಲ್ಲಿ 740, ಪ್ರಸಕ್ತ ಸಾಲಿನಲ್ಲಿ 1153 ಮಾಡಲಾಗಿದೆ. ಸಂತಾನಹರಣ ಶಸ್ತ್ರ ಚಿಕಿತ್ಸೆಗಳನ್ನು ಪ್ರತೀ ಬೀದಿ ನಾಯಿಗಳಿಗೂ ಮಾಡಬೇಕು. ಈ ಬಗ್ಗೆ ಪಶು ವೈದ್ಯಾಧಿಕಾರಿಗಳಿಗೆ ಗುರಿಯನ್ನು ನಿಗಧಿಪಡಿಸಿ, ಸಾಧನೆ ಮಾಡಬೇಕು, ತಪ್ಪಿದ್ದಲ್ಲಿ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದ ಸರ್ಕಾರಿ ಗೋಶಾಲೆಯ ನಿರ್ವಹಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಸ್ಥಳೀಯವಾಗಿಯೇ ಹಸಿ ಹುಲ್ಲನ್ನು ಬೆಳೆದು, ಜಾನುವಾರುಗಳ ಮೇವನ್ನಾಗಿಸಿಕೊಳ್ಳಬೇಕು. ಅಲ್ಲಿನ ಪರಿಸರದ ಅಂತರ್ಜಲ ಹೆಚ್ಚಿಸಲು ಮಳೆ ಕೊಯ್ಲು ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದ ಅವರು, ಕಾಪು ತಾಲೂಕಿನ ಎಲ್ಲೂರು ಗ್ರಾಮದ ಸ.ನಂ 400 ರಲ್ಲಿ 3.96 ಎಕ್ರೆ ಜಾಗದಲ್ಲಿ ಗೋಶಾಲೆ ನಿರ್ಮಾಣಕ್ಕೆ ಜಾಗ ನೀಡಲಾಗಿದ್ದು, ಸರಕಾರದ ಸೂಚನೆ ಅನುಸಾರ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹೇಳಿದರು.

ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸಹಕಾರದೊಂದಿಗೆ, 2 ಜನ ಸದಸ್ಯರುಗಳನ್ನೊಳಗೊಂಡ ಪ್ರಾಣಿ ದಯಾ ಸಂಘದ ಸಮಿತಿಯನ್ನು ರಚಿಸುವುದರೊಂದಿಗೆ ಪ್ರಾಣಿಗಳ ಆರೋಗ್ಯ ಕ್ಷೇಮ ಹಾಗೂ ನಿಯಂತ್ರಣದ ಬಗ್ಗೆ ಕ್ರಮವಹಿಸಬೇಕು ಎಂದರು.

ಕಾನೂನು ಪ್ರಾಣಿ ಕಲ್ಯಾಣ ಸಲಹೆಗಾರರು, ಪ್ರಾಣಿ ಸ್ವಯಂ ಸೇವಕರು, ಅನಿಮಲ್ ವೆಲ್‌ಫೇರ್ ವಾರ್ಡನ್ ಮತ್ತು ಪ್ರಾಣಿ ರಕ್ಷಕರ ನೇಮಕಾತಿಗೆ ಆಸಕ್ತರಿಂದ ಅರ್ಜಿ ಸ್ವೀಕರಿಸಲು, ಪತ್ರಿಕಾ ಪ್ರಕಟಣೆ ನೀಡಿ, ಸೂಕ್ತ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಬೇಕೆಂದು ಸೂಚನೆ ನೀಡಿದರು.

ಸಾಲಿಗ್ರಾಮದಲ್ಲಿ ಅನಾಥ ಹಾಗೂ ಅನಾರೋಗ್ಯ ಪೀಡಿತ ಅಂಗವಿಕಲತೆ ಹೊಂದಿದ ಪ್ರಾಣಿ ಪಕ್ಷಿಗಳ ಸಂರಕ್ಷಿಸುತ್ತಿರುವ ಬಗ್ಗೆ ಪರ ಹಾಗೂ ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಸೂಕ್ತ ವರದಿಯನ್ನು ನೀಡುವಂತೆ ಸೂಚನೆ ನೀಡಿದರು.

ರಸ್ತೆ ಅಪಘಾತದಿಂದ ಪ್ರಾಣಿಗಳು ಮರಣ ಹೊಂದಿದರೆ ಅವುಗಳ ಅಂತ್ಯಕ್ರಿಯೆ ಮಾಡಲು ಸೂಕ್ತ ಜಾಗ ನೀಡಬೇಕೆಂಬ ಬೇಡಿಕೆಗಳಿವೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕ ಡಾ. ಶಂಕರ್ ಶೆಟ್ಟಿ, ನಗರಸಭೆ ಪೌರಾಯುಕ್ತ ರಾಯಪ್ಪ, ಪ್ರಾಣಿ ದಯಾ ಸಂಘದ ಡಾ. ಸರ್ವೋತ್ತಮ ಉಡುಪ, ಸುಕುಮಾರ್ ಮುನಿಯಾಲು, ಮಧ್ವರಾಜ್ ಉಡುಪ, ಮಂಜುಳಾ ಕರ್ಕೇರ್ಕರ್, ಮಿಷಲ್ ರೋಷನಿ ಪಿರೇರಾ, ನಾಗರಾಜ ರಾವ್, ಸಿ.ಎನ್ ಶೀಲಾ, ಬಬಿತಾ ರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here