ಉಡುಪಿ: ಪರಶುರಾಮ ಥೀರ್ಮ್ ಪಾರ್ಕ್ ಒಂದು ಧಾರ್ಮಿಕ ಕ್ಷೇತ್ರವಲ್ಲ. ಅದೊಂದು ಥೀಮ್ ಪಾರ್ಕ್ ಅಷ್ಟೇ. ಅಲ್ಲಿಗೆ ಪಾದರಕ್ಷೆಯನ್ನು ಹಾಕೊಂಡು ಹೋಗಬಹುದು. ಅಲ್ಲಿ ತೆಂಗಿನಕಾಯಿ ಒಡಿಯಲು ಇಲ್ಲ, ಊದುಬತ್ತಿ ಹಚ್ಚಲು ಇಲ್ಲ, ಮಂಗಳಾರತಿ ಮಾಡ್ಲಿಕ್ಕಿಲ್ಲ. ಅದೊಂದು ಪ್ರವಾಸೋದ್ಯಮ ಸ್ಥಳವೆಂದು ಮೊದಲಿನಿಂದಲೂ ನಾನು ಹೇಳಿದ್ದೆ. ಆದರೆ, ಈಗ ಕೆಲವರು, ಪರಶುರಾಮ ಥೀರ್ಮ್ ಪಾರ್ಕ್ ನಲ್ಲಿ ಹಿಂದುತ್ವಕ್ಕೆ ದಕ್ಕೆಯಾಗಿದೆ. ಹಿಂದೂಗಳ ಭಾವನೆಗೆ ದಕ್ಕೆಯಾಗಿದೆ ಎಂದೆಲ್ಲ ಭಾಷಣ ಮಾಡ್ತಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.
ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಈ ಪರಶುರಾಮ ಥೀಮ್ ಪಾರ್ಕ್ ಮಾಡಿದ್ದು. ನಾವು ಅವತ್ತೇ ಹೇಳಿದ್ವಿ. ಈ ಯೋಜನೆ ಪೂರ್ಣಗೊಂಡಿಲ್ಲ, ಸಣ್ಣಪುಟ್ಟ ಬದಲಾವಣೆಗಳಿವೆ. ಎರಡು ತಿಂಗಳ ಕಾಲಾವಕಾಶಬೇಕೆಂದು ವಿಗ್ರಹ ನಿರ್ಮಿಸಿದ ಶಿಲ್ಪಿಗೆ ಸನ್ಮಾನ ಮಾಡುವ ಸಂದರ್ಭದಲ್ಲೇ ಘೋಷಣೆ ಮಾಡಿದ್ದೆ. ಆದರೆ, ಕೆಲವರಿಗೆ ಈಗ ಹಿಂದುತ್ವ ಶುರುವಾಗಿಬಿಟ್ಟಿದೆ. ದಕ್ಕೆಯಾಗಿದೆಂದು ಹೇಳುವವರು ಕೆಳಗೆ ನಿರ್ಮಿಸಿರುವ ಭಜನಾ ಮಂದಿರಕ್ಕೆ ಒಂದು ದಿನವೂ ಭೇಟಿಕೊಟ್ಟಿಲ್ಲ. ಒಂದು ರೂಪಾಯಿ ಹುಂಡಿಗೆ ದುಡ್ಡು ಹಾಕಿಲ್ಲ. ಪರಶುರಾಮನ ವಿಗ್ರಹದ ಬಗ್ಗೆ ಮಾತಾಡ್ತಾರೆ ಎಂದ್ರು.
ಧಾರ್ಮಿಕ ಸ್ಪರ್ಶ ಕೊಡುವ ನಿಟ್ಟಿನಲ್ಲಿ ಕೆಳಗೊಂದು ಭಜನಾ ಮಂದಿರ ನಿರ್ಮಾಣ ಹಾಗೂ ಪರಶುರಾಮ ಮೂರ್ತಿಯ ಉದ್ಘಾಟನೆ. ಮೂರು ದಿನದ ಕಾರ್ಯಕ್ರಮ ಮಾಡಿದ್ದೇವೆ. ಮೊದಲ ದಿನ ಪರಶುರಾಮ ಮೂರ್ತಿಯ ಉದ್ಘಾಟನೆ. ಎರಡನೇ ದಿನ ಭಜನಾ ಮಂದಿರದ ಉದ್ಘಾಟನೆ. ಇಡೀ ಬೈಲೂರಿನಲ್ಲಿ ಭಜನಾ ತಂಡಗಳ ಮೆರವಣಿಗೆ ನಡೆಸಿದ್ವಿ, ಎರಡು ಕಾರ್ಯಕ್ರಮಗಳನ್ನು ಒಟ್ಟಿಗೆ ಉದ್ಘಾಟಿಸಿಲ್ಲ. ಧಾರ್ಮಿಕತೆ ಬೇರೆ, ಥೀಮ್ ಪಾರ್ಕ್ ನ ಸ್ಪರ್ಶ ಬೇರೆ. ಪರಶುರಾಮನ ಮೂರ್ತಿಯನ್ನು ಬೇರೆಯಾಗಿ ಉದ್ಘಾಟನೆ ಮಾಡಿದ್ದೇವು, ಭಜನಾ ಮಂದಿರವನ್ನು ಬೇರೆಯಾಗಿ ಉದ್ಘಾಟಿಸಿದ್ದೇವು. ಮೂರನೇ ದಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೈಲೂರಿನ ಮೈದಾನದಲ್ಲಿ ಆಯೋಜಿಸಿದ್ದೇವು. ಇದ್ಯಾವುದು ಅರ್ಥ ಆಗದೆ ಇರುವ ಅರೆ ಮರ್ಲೆರ್ ಗೆ ನಾವು ಎಂಥಾ ಹೇಳುವುದು. ಇದೆಲ್ಲ ಅರ್ಥ ಆಗದವರು ಏನೇನೂ ಸುಮ್ಮನೆ ಮಾತಾಡ್ತಾರೆ. ದಿನಕ್ಕೊಂದು ಕಟ್ಟು ಕತೆಗಳನ್ನು ಹೇಳುತ್ತಾ ಜನರನ್ನು ನಂಬಿಸುವ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
ಈ ಮೂಲಕ ಮುನಿಯಾಲು ಉದಯಕುಮಾರ್ ಶೆಟ್ರರನ್ನು ಹಾಗೂ ಕಾಂಗ್ರೆಸ್ ಅನ್ನು ಆಗ್ರಹಿಸುತ್ತೇನೆ. ಪರಶುರಾಮ ಮೂರ್ತಿಯ ಬಗ್ಗೆ ಅನುಮಾನ ಇದ್ರೆ, ತನಿಖೆ ಮಾಡಬೇಡಿಯೆಂದು ಯಾರು ನಿಮಗೆ ಅಡ್ಡಿ ಮಾಡಿದ್ದಾರೆ. ಸರಕಾರ ಬಂದು ಐದು ತಿಂಗಳಾಯ್ತಲ್ಲ ಯಾಕೆ ಇನ್ನೂ ತನಿಖೆ ಮಾಡಿಲ್ಲ. ತನಿಖೆ ಮಾಡ್ತಿಲ್ಲ ಅಂಥಾ ಆದ್ರೆ ನಿಮ್ಮದೆ ಏನೋ ಪ್ರಾಬ್ಲಂ, ನಮ್ಮ ಪ್ರಾಬ್ಲಂ ಅಲ್ಲ ಅದು ಎಂದು ಹೇಳಿದ್ರು.
ನಾನು ಮೊನ್ನೆ ಪತ್ರಿಕಾಗೋಷ್ಠಿಯಲ್ಲೇ ಹೇಳಿದ್ದೇನೆ. ಇದೊಂದು ಪ್ರವಾಸೋದ್ಯಮ ಕ್ಷೇತ್ರ, ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದೆ ಅಂಥಾ ಆದ್ರೆ ಅವನನ್ನು ಗಲ್ಲಿಗೇರಿಸಿ. ಯಾರನ್ನೂ ಬೇಕಾದ್ರೂ ಶಿಕ್ಷೆಗೆ ಒಳಪಡಿಸಿ ಎಂದಿದ್ದೇನೆ. ಕಾಂಗ್ರೆಸ್ ನ ದ್ವಂದ್ವ ಮತ್ತು ನಿಲುವು ಏನಾಂದ್ರೆ, ತನಿಖೆ ಮಾಡಲು ತಯಾರಿಲ್ಲ. ನಾವು ಮಂಜೂರಾತಿ ಮಾಡಿದಂಥಾ ಹಣ ಬಿಡುಗಡೆ ಮಾಡಲು ತಯಾರಿಲ್ಲ. ಕೆಲಸ ಶುರು ಮಾಡಲು ತಯಾರಿಲ್ಲ, ಅಪಪ್ರಚಾರ ನಿಲ್ಲಿಸಲು ತಯಾರಿಲ್ಲ. ಯಾವುದನ್ನೂ ಮಾಡಲು ತಯಾರಿಲ್ಲ. ತನಿಖೆ ಮಾಡಬೇಕಾದವರು ಯಾರು. ಯಾರೋ ಪುರಸಭೆಯ ಚಿಲ್ಲರೆ ಗಿರಾಕಿ ಹೋಗಿ ಇದು ಫೈಬರ್ ಹೇಳಿದ್ರೆ ಆಗಲ್ಲ. ಅದಕ್ಕೊಬ್ಬ ಇಂಜಿನಿಯರ್ ಹೋಗ್ಬೇಕು. ಇದು ಏನು ಅಂಥಾ ಹೇಳಬೇಕು. ಅದು ಬಿಟ್ಟು ನಾವು ಏನೂ ಬೇಕಾದ್ರೂ ಹೇಳಿತ್ತೀವಿ ಅಂದ್ರೆ, ಕಾನೂನು ತನಿಖಾಧಿಕಾರಿಯಾಗಲು ಸಾಧ್ಯವಿಲ್ಲ ಎಂದು ಗುಡುಗಿದ್ರು.
ಸಭೆಯಲ್ಲಿ ಕಾರ್ಕಳ ಕ್ಷೇತ್ರಾಧ್ಯಕ್ಷ ಮಣಿರಾಜ್ ಶೆಟ್ಟಿ, ಮುಖಂಡರಾದ ಮಹಾವೀರ ಜೈನ್, ರೇಶ್ಮಾ ಉದಯ್ ಶೆಟ್ಟಿ ಮೊದಲಾದವರು ಇದ್ದರು.