h
ಉಡುಪಿ: ಕ್ಷುಲ್ಲಕ ಕಾರಣಕ್ಕೆ ಎನ್ ಎಸ್ ಯು ಐ ಜಿಲ್ಲಾ ನಾಯಕ ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಕುಂಜಿಬೆಟ್ಟು ನಿವಾಸಿ ಅಕ್ಷತ್ ಪೈ (27), ಸುಶಾಂತ್ (25), ರಮಾನಂದ ಪೈ (42), ಸಂತೋಷ್ ಕೊರಗ (38), ಅಲೆವೂರು ನಿವಾಸಿ ಶಂಶಾಂಕ್ ನಾಯಕ್ (25) ಎಂದು ಗುರುತಿಸಲಾಗಿದೆ.
ಜನವರಿ 30 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಿಟ್ಟಾಡಿ ಬೈಲೂರು ಬಡಗುಬೆಟ್ಟು ನಿವಾಸಿ ಶರತ್ ಕುಂದರ್ (25) ಅವರು ತಮ್ಮ ಸ್ನೇಹಿತನ ಕಾರಿನಲ್ಲಿ ಮಣಿಪಾಲದ ಹಕುನಾ ಮಟಾಟ ಹೋಟೆಲ್ ಗೆ ಊಟಕ್ಕೆ ತೆರಳಿದ್ದರು. ಅಲ್ಲಿ ಅಕ್ಷತ್ ಪೈ, ಶಶಾಂಕ್ ಹಾಗೂ ಉಡುಪಿಯ ರಾಧಾಕೃಷ್ಣ ಜನರಲ್ ಸ್ಟೋರ್ ಮಾಲಕರ ಮಗನೊಂದಿಗೆ ಸಣ್ಣ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ.
ನಂತರ ಶರತ್ ಕುಂದರ್ ಮನೆಗೆ ವಾಪಸ್ಸಾಗುತ್ತಿದ್ದಾಗ ಕಲ್ಸಂಕ ಬಳಿ ತಲುಪುವ ಸಂದರ್ಭದಲ್ಲಿ ಅಕ್ಷತ್ ಪೈ ಕರೆ ಮಾಡಿ, ಹೋಟೆಲ್‌ನ ಗಲಾಟೆ ವಿಚಾರವಾಗಿ ಮಾತನಾಡಲು ಪಿಪಿಸಿ ಕ್ರಾಸ್ ಬಳಿ ನಿಲ್ಲುವಂತೆ ತಿಳಿಸಿದ್ದಾನೆ. ರಾತ್ರಿ ಸುಮಾರು 11.30ರ ವೇಳೆಗೆ ಪಿಪಿಸಿ ಕ್ರಾಸ್ ಸಮೀಪ ಕೋಸ್ಟಲ್ ಚಿಕನ್ ಅಂಗಡಿಯ ಎದುರು ರಸ್ತೆಯ ಬದಿಯಲ್ಲಿ ಶರತ್ ಕುಂದರ್ ತಮ್ಮ ಸ್ನೇಹಿತರಾದ ಧ್ರುವಾ, ಸಿಲಾನ್ ಗಗನ್ ಹಾಗೂ ರೋಹಿತ್ ಜೊತೆ ಮಾತನಾಡುತ್ತ ನಿಂತಿದ್ದ ವೇಳೆ ಟಾಟಾ ಸಫಾರಿ ಮತ್ತು ಮಹೀಂದ್ರ ಥಾರ್ ವಾಹನಗಳು ಏಕಾಏಕಿ ಬಂದು ನಿಂತಿವೆ.
ವಾಹನಗಳಿಂದ ಇಳಿದ ಅಕ್ಷತ್ ಪೈ, ಶಶಾಂಕ್ ಸೇರಿದಂತೆ 6-7 ಮಂದಿ ಕೈಯಲ್ಲಿ ತಲವಾರಿನಂತಹ ಆಯುಧ ಹಾಗೂ ಕಬ್ಬಿಣದ ಚೈನ್ ಹಿಡಿದು ಶರತ್ ಕುಂದರ್ ಮೇಲೆ ಹಲ್ಲೆ ನಡೆಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆ ಬಳಿಕ ಆರೋಪಿಗಳು ಜೀವ ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದರು. ಗಾಯಾಳುವನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳು ಕೃತ್ಯಕ್ಕೆ ಬಳಸಿದ ಹುಂಡೈ ಅವೆನ್ಯೂ ಕಾರು (ಅಂದಾಜು ಮೌಲ್ಯ ₹8 ಲಕ್ಷ) ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

