ಉಡುಪಿ: ಅಂದು ಪರಶುರಾಮನ ಮೂರ್ತಿಯ ಅರ್ಧ ಭಾಗ ತೆಗೆದುಕೊಂಡು ಹೋಗಲು ಶಾಸಕ ಸುನಿಲ್ ಕುಮಾರ್ ಅವರೇ ಕಾರಣರಾಗಿದ್ದರು. ಇದೀಗ ಮೇಲ್ಛಾವಣಿಯ ತ್ರಾಮದ ಹೊದಿಕೆ ಕಳ್ಳತನ ಆಗಲು ಅವರೇ ಕಾರಣರಾಗಿದ್ದಾರೆ. ಅವರು ತನ್ನ ತಪ್ಪನ್ನು ಒಪ್ಪಿಕೊಂಡು ಜನರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೇಲ್ಛಾವಣಿಗೆ ಹಾಕಲಾಗಿದ್ದ ಬೆಲೆಬಾಳುವ ತಾಮ್ರದ ಹೊದಿಕೆಗಳ ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಶಾಸಕ ಸುನಿಲ್ ಕುಮಾರ್ ಅವರು ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. ಈ ಕುರಿತು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುನಿಲ್ ಕುಮಾರ್ ಯಾವ ಮುಖ ಇಟ್ಟುಕೊಂಡು ಥೀಮ್ ಪಾರ್ಕ್ ಗೆ ಹೋಗ್ತಾರೆ ಎಂದು ಗೊತ್ತಾಗಲ್ಲ. ಇವತ್ತು ಅವರೇ ಕಳ್ಳತನ ಮಾಡಿಸಿ ಅಲ್ಲಿಗೆ ಹೋಗಿದ್ದಾರೆ. ಥೀಮ್ ಪಾರ್ಕ್ ಅನ್ನು ವಿವಾದಿತ ಕೇಂದ್ರವನ್ನಾಗಿ ಮಾಡಲು ಶಾಸಕರು ಬಹಳಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ ನಾವು ನಂಬಿದ ದೇವರು ಈ ಸ್ಥಳವನ್ನು ವಿವಾದಿತ ಕೇಂದ್ರವನ್ನಾಗಿ ಪರಿರ್ವತಿಸಲು ಬಿಡಲ್ಲ ಎಂದು ಕಿಡಿಕಾರಿದರು.
ಪರಶುರಾಮ ಥೀಮ್ ಪಾರ್ಕ್ ನ ಆಡಿಟೋರಿಯಂನಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ವಸ್ತುಗಳಿದ್ದವು. ಕಳ್ಳರು ನಿಜವಾಗಿ ಕಳ್ಳತನ ಮಾಡುವ ಉದ್ದೇಶದಿಂದ ಬಂದಿದ್ದರೆ ಅಲ್ಲಿರುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು. ಆದರೆ, ಅಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆಯದೆ ರಸ್ತೆಗೆ ಕಾಣುವ ಮೇಲ್ಛಾವಣಿಯ ಮೂವತ್ತು ಪೀಸ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಮೇಲ್ನೋಟಕ್ಕೆ ಇದೊಂದು ಕಳ್ಳತನ ಮಾಡಿಸಿರುವ ಪ್ರಕರಣದಂತೆ ಕಾಣುತ್ತಿದೆ ಎಂದು ಕುಟುಕಿದರು.
ಸುನಿಲ್ ಕುಮಾರ್ ದೇಶ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಇರುವ ಹಿಂದೂಗಳ ಧಾರ್ಮಿಕ ಭಾವನೆಗೆ ಗಾಸಿಯಾಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಇದು ಬಹಳ ಅನ್ಯಾಯ. ಕಾರ್ಕಳ ಬಹಳಷ್ಟು ಪವಿತ್ರವಾದ ಕ್ಷೇತ್ರ. ಇಂತಹ ಪವಿತ್ರ ಕ್ಷೇತ್ರದಲ್ಲಿ ಕೆಟ್ಟ ಕೆಲಸವನ್ನು ಪುನರಾವರ್ತನೆ ಮಾಡುತ್ತಿರುವುದು ಹಾಗೂ ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡಿನ ಕೆಲಸ. ಇವರು ಈಗಾಗಲೇ ಮಾಡಿರುವ ತಪ್ಪಿಗೆ ಸಾಕ್ಷ್ಯ ನಾಶ, ನಂಬಿಕೆ ದ್ರೋಹ ಮಾಡಿದ್ದರೆಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ ಎಂದು ಟೀಕಿಸಿದರು.
ಶಾಸಕರ ಇದೆಲ್ಲ ನಾಟಕವನ್ನು ನೋಡಿ ನಾನು ಹೈಕೋರ್ಟ್ ಗೆ ಪಿಎಲ್ ಹಾಕಿದ್ದೇನೆ. ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಮತ್ತೆ ಪ್ರವಾಸೋದ್ಯಮ ಬೆಳೆಯಬೇಕು. ಪರಶುರಾಮ ಥೀಮ್ ಪಾರ್ಕ್ ಮತ್ತೆ ಶಾಸ್ತ್ರೋಕ್ತವಾಗಿ ಪುನರಾರಂಭವಾಗಬೇಕು ಎಂಬುವುದು ನನ್ನ ಉದ್ದೇಶ. ಆದರೆ ಅದಕ್ಕೂ ತಡೆಯೊಡ್ಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಅವರು ಮಾಡಿರುವ ಪಾಪ ಪ್ರಾಯಶ್ಚಿತ್ತವಾಗಬೇಕಾದರೆ ಅಲ್ಲಿರುವ ಕಸವನ್ನು ಎತ್ತಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಶಾಸಕರು ಪರಶುರಾಮ ಥೀಮ್ ಪಾರ್ಕಿನ ಮರ್ಯಾದಿಯನ್ನು ಉಳಿಸಿಕೊಂಡು ಅದನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಲು ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ ಎಂದರು
ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ಆಗಲು ಶಾಸಕ ಸುನಿಲ್ ಕುಮಾರ್ ಕಾರಣ- ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪ
More articles

