Monday, January 12, 2026

ಕಾನೂನು ಬದಲಾದರೂ, ಹಳ್ಳಿಯಲ್ಲಿ ಹುಟ್ಟಿದ ಗಾದೆಗಳು ಸುಳ್ಳಾಗದು- ಪುರುಷೋತ್ತಮ್

Must read

ಉಡುಪಿ: ಕಾಲದಿಂದ ಕಾಲಕ್ಕೆ ಕಾನೂನುಗಳು ಬದಲಾಗುತ್ತಿರುತ್ತವೆ. ಅನೇಕ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಆದರೆ ಹಳ್ಳಿಯಲ್ಲಿ ನಮ್ಮ ಹಿರಿಯರು ಕಟ್ಟಿದ ಗಾದೆ ಮಾತುಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಸಿಜೆಎಮ್ ಎಮ್. ಪುರುಷೋತ್ತಮ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಶುಕ್ರವಾರ ಉಡುಪಿಯ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ” ಪೋಕ್ಸೊ ಕಾಯ್ದೆ”ಯ ಮಾಹಿತಿ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ನಮ್ಮ ಪೂರ್ವಿಕರು ಯಾವುದೇ ಪಿಹೆಚ್‌ಡಿ ಪಡೆಯದಿದ್ದರೂ, ಜೀವನದ ಅನುಭವದ ಮೂಲಕ ಕಟ್ಟಿರುವ ಗಾದೆ ಮಾತುಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ಅದುವೇ ಶಾಶ್ವತ. “ಮಕ್ಕಳನ್ನು ದೇವರಂತೆ ಕಾಣು” ಎಂದು ಶತಮಾನಗಳ ಹಿಂದೆಯೇ ಹಿರಿಯರು ತಿಳಿಸಿದ್ದರು. ಇಂದು “ಮಕ್ಕಳನ್ನು ದೇವರಂತೆ ಕಂಡರೇ” ಪೋಕ್ಸೊ ಪ್ರಕರಣಗಳು ದಾಖಲಾಗುವುದು ತಪ್ಪುತ್ತದೆ ಎಂದವರು ನುಡಿದರು.

2012 ರ ನವೆಂಬರ್ 14 ರಂದು ಪೋಕ್ಸೊ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯಲ್ಲಿ ಒಟ್ಟು 46 ಸೆಕ್ಷನ್‌ಗಳಿದೆ. ಈ ಕಾಯ್ದೆಯನ್ನು 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲಾಗುವ
ಶೋಷಣೆ, ಲೈಂಗಿಕ ಶೋಷಣೆಗೆ ಒಳಗಾದವರಿಗೆ ನ್ಯಾಯದೊರಕಿಸಿ ಕೊಡಲೆಂದು ರೂಪಿಸಲಾಗಿದೆ. ಕೆಲವು ಯೌವನದ ಪೇಮಾಂಕುರವು, ಆಕರ್ಷಣೆಗೆ ಒಳಗಾಗಿ ಪರಸ್ಪರ ಒಪ್ಪಿಗೆಯಿಂದ ಒಂದಾಗಿದ್ದರೂ, ಪೋಷಕರ ಒತ್ತಡದಿಂದ ಸುಳ್ಳು ಪೋಕ್ಸೊ ಪ್ರಕರಣಗಳು ದಾಖಲಾದ ನಿದರ್ಶನಗಳಿವೆ. ಆರೋಪ ಸಾಭೀತಾಗಿ ಶಿಕ್ಷೆ ಪ್ರಕಟಗೊಂಡರೇ ಆತನ ಜೀವನವೇ ಬರ್ಬಾದ್ ಆಗುತ್ತದೆ. ಹೀಗಾಗಿ ಕಾಯ್ದೆಯ ಕುರಿತಾಗಿ ಜಾಗೃತಿ ಅತ್ಯಗತ್ಯ ಎಂದರು.

ಇತರ ಪ್ರಕರಣಗಳಲ್ಲಿ ಆರೋಪಿಗೆ ಶಿಕ್ಷೆಯನ್ನು ಪ್ರಕಟಿಸುವ ವೇಳೆ ನ್ಯಾಯಾಧೀಶರು ತಮ್ಮ ಪರಮಾಧಿಕಾರವನ್ನು ಬಳಸಲು ಅವಕಾಶವಿದೆ. ಆದರೆ ಪೋಕ್ಸೊ ಕಾಯ್ದೆಯಲ್ಲಿ ನ್ಯಾಯಧೀಶರು ಕನಿಷ್ಠ 10 ವರ್ಷ ಶಿಕ್ಷೆಯನ್ನು ನೀಡಲೇಬೇಕಾಗಿದ್ದು, ಜೀವಾವಧಿ ಶಿಕ್ಷೆಯನ್ನು ನೀಡಲು ಅವಕಾಶವಿದೆ. ಅಲ್ಲದೇ ಆರೋಪಿಯೂ ಕೃತ್ಯವೆಸಗಿದ್ದಾನೆ ಎಂದು ಊಹಿಸಬಹುದಾಗಿದೆ ಎಂದರು.

ಆಶ್ಲೀಲ ಪೋಟೋ ನೋಡುವುದು ಅಪರಾಧವಾಗಿದೆ. ಪ್ರಕರಣದ ಬಗ್ಗೆ ತಿಳಿದು, ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡದೇ ಇರುವುದು, ಸುಳ್ಳು ಪ್ರಕರಣ ದಾಖಲಿಸುವುದು ಈ ಎಲ್ಲಾ ಕೃತ್ಯಗಳನ್ನು ತಪ್ಪು ಎಂದು ಕಾಯ್ದೆ ತಿಳಿಸಿದ್ದು, ಶಿಕ್ಷೆಯನ್ನು ವಿಧಿಸಲಾಗಿದೆ. ಆದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಈ ಕಾಯ್ದೆಯ ಬಗ್ಗೆ ತಿಳಿದುಕೊಂಡು, ಇತರರಿಗೂ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಿ ಎಂದರು.

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಪ್ರೋ.ಡಾ.ನಿರ್ಮಲಾ ಕುಮಾರಿ ಮಾತನಾಡಿ, ಭಾರತದ ಸಂವಿಧಾನ 15 ನೇ ಅನುಚ್ಛೇದವು ಯಾರನ್ನು ತಾರತಮ್ಯ ಮಾಡಬಾರದು ಎಂದು ಹೇಳುವುದಲ್ಲದೇ, ಶೋಷಣೆಯನ್ನು ತಡೆಗಟ್ಟಲು ವಿಶೇಷ ಕಾಯ್ದೆಯನ್ನು ರಚಿಸಲು ಅವಕಾಶವನ್ನು ಕಲ್ಪಿಸಿದೆ. ಹೀಗಾಗಿ ಪೋಕ್ಸೊ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ” ಕಾನೂನು ಆಯೋಗವು” ಈಗಾಗಲೇ 227 ವರದಿಗಳನ್ನು ಸಿದ್ದಪಡಿಸಿದ್ದು, ಕಾಲ ಕಾಲಕ್ಕೆ ಕಾನೂನು ರಚಿಸುತ್ತವೆ. ಅಲ್ಲದೇ ನ್ಯಾಯಾಲಯ ಕೆಲವೊಂದು ಪ್ರಕರಣಗಳ ತೀರ್ಪಿನಲ್ಲಿ ಕಾನೂನು ರಚಿಸಲು ತಿಳಿಸಿವೆ. ವಿಶಾಖ್ v. ಸ್ಟೇಟ್ ಆಫ್ ರಾಜಸ್ತಾನ್, ಪರಮಾನಂದ ಕಠಾರ v. ಯೂನಿಯನ್ ಆಫ್ ಇಂಡಿಯಾ ಪ್ರಕರಣಗಳು ಪ್ರಮುಖವಾಗಿದೆ ಎಂದವರು ನುಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಕಾಂತ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ರಾಘವೇಂದ್ರ ಉಪಸ್ಥಿತರಿದ್ದರು.
ಪತ್ರಕರ್ತ ರಕ್ಷಿತ್ ಬೆಳಪು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅಶ್ಮಿತಾ ಅತಿಥಿಗಳನ್ನು ಪರಿಚಯಿಸಿದರು. ನವ್ಯಾ ವಂದಿಸಿದರು. ನಿಶಾ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here