ಉಡುಪಿ: ಉಡುಪಿ ಜಿಲ್ಲಾ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ (ಶ್ರೀಶಾರದಾ ಜನಸೇವಾ ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ) ಅಷ್ಟಮ ವರ್ಷದ ಶಾರದಾ ಮಹೋತ್ಸವ ಇದೇ ಸೆ.29ರ ಸೋಮವಾರದಿಂದ ಅ.2ರ ಗುರುವಾರದವರೆಗೆ ಕಿನ್ನಿಮುಲ್ಕಿ ರಾ-ಹೆ 66ರ ಸ್ವಾಗತ ಗೋಪುರ ಬಳಿಯ ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಸೋಮವಾರ ಬೆಳಿಗ್ಗೆಯಿಂದ ಶ್ರೀ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ, ಗಣ ಹೋಮ ಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ, ವಿದ್ವಾನ್ ಹೆರ್ಗ ಹರಿದಾಸ್ ಭಟ್ ರವರಿಂದ ಪ್ರವಚನ, ಸಾಯಂಕಾಲ ದೀಪಾರಾಧನೆ ಸಹಿತ ರಂಗ ಪೂಜೆ ನೆರವೇರಲಿದೆ.
ಸೋಮವಾರ ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಭೀಮಸೇತು ಮುನಿವೃಂದ ಮಠದ ಶ್ರೀ ಶ್ರೀ ರಘುಮಾನ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶ್ ಪಾಲ್ ಸುವರ್ಣ, ಉದ್ಯಮಿಗಳಾದ ಎಸ್ ಆರ್ ಉದಯ್ ಕುಮಾರ್ ಶೇಟ್, ಸಾಧು ಸಾಲಿಯಾನ್ ಮಲ್ಪೆ, ಮೋಹನ್ ಮುದ್ದಣ್ಣ ಶೆಟ್ಟಿ, ಪ್ರಭಾಶಂಕರ್ ಪದ್ಮಶಾಲಿ, ರಾಘವೇಂದ್ರ ಭಟ್, ದೀಪಕ್ ಪುತ್ರನ್ ಮತ್ತಿತರರು ಉಪಸ್ಥಿತರಿರಲಿದ್ದಾರೆ.
ಮಂಗಳವಾರ ಸಂಜೆ 5 ಗಂಟೆಯಿಂದ ದುರ್ಗಾ ನಮಸ್ಕಾರ ಪೂಜೆ, ಬುಧವಾರ ವಿದ್ಯಾರ್ಜನೆ, ಪುಷ್ಪಾರ್ಚನೆ ಸೇವಾ ಪೂಜೆಗಳು ನಡೆಯಲಿವೆ. ಪ್ರತಿದಿನ ಬೆಳಿಗ್ಗೆ ವಿವಿಧ ಭಜನಾ ಮಂಡಳಿಗಳಿಂದ ನಾಮ ಸಂಕೀರ್ತನೆ ಮತ್ತು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಗುರುವಾರ ಸಂಜೆ 4 ಗಂಟೆಯಿಂದ ಶ್ರೀ ಶಾರದಾ ವಿಗ್ರಹದ ವಿಸರ್ಜನಾ ಭವ್ಯ ಶೋಭೆಯಾತ್ರೆಯು ಕಿನ್ನಿಮುಲ್ಕಿ ಮೈದಾನದಿಂದ ಹೊರಟು ಅಗ್ನಿಶಾಮಕ ಇಲಾಖೆ ರಸ್ತೆ, ವಿವೇಕಾನಂದ ರಸ್ತೆ, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಜೋಡುಕಟ್ಟೆಯಿಂದ ಮುಖ್ಯ ರಸ್ತೆಯಲ್ಲಿ ಸಾಗಿ ಸ್ವಾಗತ ಗೋಪುರದ ಮೂಲಕ ಕನ್ನರ್ಪಾಡಿ-ಕಡೆಕಾರ್ ಮಾರ್ಗವಾಗಿ ಸಾಗಿ ಕಡೆಕಾರಿನ ದೇವರ ಕೆರೆಯಲ್ಲಿ ಜಲ ಸ್ತಂಭನಗೊಳ್ಳಲಿದೆ ಎಂದು ಅಧ್ಯಕ್ಷರಾದ ನಾಗಭೂಷಣ್ ಶೇಟ್ ತಿಳಿಸಿದ್ದಾರೆ.


