ಉಡುಪಿ: ಲಾರಿಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಪಾರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡ ಉಡುಪಿ ಸೆನ್ ಅಪರಾಧ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಉಡುಪಿ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿ ನಿವಾಸಿ ಗಣೇಶ (38) ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗೊರಂಟ್ಲ ನಿವಾಸಿ ಪಿ. ಗೋಪಾಲ ರೆಡ್ಡಿ ( 43) ಬಂಧಿತ ಆರೋಪಿಗಳು.
ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರು ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಲಾರಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ 65 ಕಿಲೋ 39 ಗ್ರಾಂ ತೂಕದ ಗಾಂಜಾ ಪತ್ತೆಯಾಗಿದೆ. ಬಂಧಿತರಿಂದ 50 ಲಕ್ಷ ಮೌಲ್ಯದ ಗಾಂಜಾ, ಎರಡು ಮೊಬೈಲ್ ಪೋನ್, ನಗದು ರೂ. 1520, ಗೂಡ್ಸ್ ಲಾರಿ ಸಹಿತ ಒಟ್ಟು 72,21,520 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ

