Sunday, January 11, 2026

ಉಡುಪಿ: ಆಡಿಯೋ‌ ವೈರಲ್ ವಿಚಾರಕ್ಕೆ ವ್ಯಕ್ತಿಯ‌ ಬರ್ಬರ ಹತ್ಯೆ: ಮೂವರ ಆರೋಪಿಗಳ ಬಂಧನ

Must read

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ಸುಬ್ರಮಣ್ಯನಗರ 9ನೇ ಅಡ್ಡರಸ್ತೆಯಲ್ಲಿ ಆ.12ರಂದು ರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಕಡಿದು ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು‌ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕೊಲೆಗೀಡಾದ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ವಿನಯ್ ದೇವಾಡಿಗ (40) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಬ್ರಹ್ಮಾವರ ಕೊಕ್ಕರ್ಣೆಯ ಗಾಂಧಿನಗರ ನಿವಾಸಿಗಳಾದ ಅಜಿತ್(28), ಅಕ್ಷೇಂದ್ರ (34) ಹಾಗೂ ಕೊಕ್ಕರ್ಣೆ ಬೆನಗಲ್ ನಿವಾಸಿ ಪ್ರದೀಪ್ ಆಚಾರ್ಯ ಎಂಬವರು ಪೊಲೀಸರಿಗೆ ಶರಣಾಗಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ
ಆಡಿಯೋವನ್ನು ವೈರಲ್ ಮಾಡಿದ ಕಾರಣಕ್ಕಾಗಿ ಸ್ನೇಹಿತರೇ ಸೇರಿ ವಿನಯ್ ನನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿ ಅಕ್ಷೇಂದ್ರನಿಗೆ ಜೀವನ್ ಎಂಬಾತನು ಬೈದಿರುವ ಆಡಿಯೋವನ್ನು ವಿನಯ್ ದೇವಾಡಿಗ ಬೇರೆಯವರಿಗೆ ಶೇರ್ ಮಾಡಿ ವೈರಲ್ ಮಾಡಿರುವುದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ವಿನಯ್ ದೇವಾಡಿಗ, ಮಂಗಳವಾರ ವೈಯಕ್ತಿಕ ಕೆಲಸದ ನಿಮಿತ್ತ ಉಡುಪಿಗೆ ಹೋಗಿ ಸಂಜೆ 6 ಗಂಟೆಗೆ ಮನೆಗೆ ಬಂದು ಕೋಣೆಯಲ್ಲಿ ಮಲಗಿದ್ದರು. ರಾತ್ರಿ ಮೂವರು ಆರೋಪಿಗಳು ಮನೆಯ ಒಳಗೆ ನುಗ್ಗಿ ಮನೆಯ ಎಲ್ಲಾ ಕಡೆಗಳಲ್ಲಿ ವಿನಯ್ ಗಾಗಿ ಹುಡುಕಾಟ ನಡೆಸಿದ್ದರು. ಈ ವೇಳೆ ಕೋಣೆಯಲ್ಲಿದ್ದ ವಿನಯ್ ಶಬ್ದದಿಂದ ಎಚ್ಚರಗೊಂಡಾಗ ಆರೋಪಿಗಳು ವಿನಯ್ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಪ್ರಯತ್ನಪಟ್ಟರು. ನಂತರ ಅಜಿತ್, ವಿನಯ್ ನನ್ನು ತಪ್ಪಿಸಿಕೊಳ್ಳದಂತೆ ಗಟ್ಟಿಯಾಗಿ ಹಿಡಿದುಕೊಂಡ. ಆಕ್ಷೇಂದ್ರ ಹಾಗೂ ಪ್ರದೀಪ್ ಮಚ್ಚು ಹಾಗೂ ಚಾಕುವಿನಿಂದ ವಿನಯ್ ದೇವಾಡಿಗ ಅವರ ತಲೆಯನ್ನು ಕಡಿದು, ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಕೂಟರ್ ನಲ್ಲಿ ಪರಾರಿಯಾಗಿದ್ದರು.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

More articles

LEAVE A REPLY

Please enter your comment!
Please enter your name here