Friday, January 9, 2026

ಜುಲೈ 13ರಂದು ಉಡುಪಿ ಶಿರೂರು ಮಠದಲ್ಲಿ ಕಟ್ಟಿಗೆ ಮುಹೂರ್ತ

Must read

ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠವು ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿದೆ. ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಇದಾಗಿದ್ದು, ಸರ್ವಜ್ಞ ಪೀಠಾರೋಹಣದ ಹಾಗೂ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿ ಆಚರಣೆಗಳಲ್ಲಿ ಕಟ್ಟಿಗೆ ಮುಹೂರ್ತ ಪ್ರಮುಖವಾಗಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನೆರವೇರಿಸಿರುವ ಭಾವಿ ಪರ್ಯಾಯ ಶಿರೂರು ಮಠದ ಕಟ್ಟಿಗೆ ಮುಹೂರ್ತವು ಇದೇ ಜುಲೈ 13ರಂದು ನೆರವೇರಲಿದೆ.

ಉಡುಪಿ ಶಿರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಮಠದ ದಿವಾನರಾದ ಉದಯ ಸರಳತ್ತಾಯ ಅವರು, ಈ ಬಾರಿಯ ಕಟ್ಟಿಗೆ ಮುಹೂರ್ತವು ಜುಲೈ 13ರಂದು ಬೆಳಿಗ್ಗೆ 9.15 ರ ಸಿಂಹ ಲಗ್ನದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಮಠದ ಪುರೋಹಿತರು ನಿಗದಿಪಡಿಸಿದ ದಿನದಂದು ಕಟ್ಟಿಗೆ ಪೇರಿಸಿಡುವ ಜಾಗದಲ್ಲಿ ನಡುಗಂಬವನ್ನು ನೆಟ್ಟು ಅದರ ಸಮ್ಮುಖದಲ್ಲಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ಬೆಳಿಗ್ಗೆ 7.30ಕ್ಕೆ ಶಿರೂರು ಮಠದಲ್ಲಿ ನವಗ್ರಹ ಇತ್ಯಾದಿ ಪ್ರಾರ್ಥನೆಯೊಂದಿಗೆ ವೇದಘೋಷ, ಕೊಂಬು, ಕಹಳೆ, ವಾದ್ಯ ಬಿರುದಾವಳಿಯ ಜೊತೆಯಲ್ಲಿ ಮಠದ ಪರಿಚಾರಕರು, ಭಕ್ತಾದಿಗಳು ಕಲ್ಸಂಕದ ಲಕ್ಷ್ಮೀ ತೋಟದಿಂದ ಕಟ್ಟಿಗೆಯನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿಬರಲಿದ್ದಾರೆ. ವಿವಿಧ ಗಣ್ಯರು, ವಿದ್ವಾಂಸರು, ದಿವಾನರು, ಮತ್ತು ಭಕ್ತರ ಸಹಿತವಾಗಿ ಚಂದ್ರಮೌಳೀಶ್ವರ, ಶ್ರೀಆನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ ಮಧ್ಯಗುರುಗಳ ಹಾಗೂ ಗರುಡನ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ನಿಗದಿಪಡಿಸಿದ ಸ್ಥಳದಲ್ಲಿ ಪೂಜಾದಿಗಳನ್ನು ಸಲ್ಲಿಸಿ ಪ್ರಾರ್ಥನೆಗೈದು ಕಟ್ಟಿಗೆ ರಥ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುತ್ತದೆ. ಈ ಕಟ್ಟಿಗೆ ರಥ ನಿರ್ಮಾಣ ಕಾರ್ಯವು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನೆರವೇರಲಿದೆ ಎಂದರು.

ಕರ್ಮಾರು ಮರದ ಸುಮಾರು 25 ಲಾರಿಯಷ್ಟು ಕಟ್ಟಿಗೆಯನ್ನು ಸಂಗ್ರಹಿಸಿ ಅದನ್ನು ಮಧ್ವ ಸರೋವರದ ಈಶಾನ್ಯ ಮೂಲೆಯಲ್ಲಿ ಸುಮಾರು 50 ಅಡಿ ಎತ್ತರ 25 ಅಡಿ ಅಗಲದ ಕಲಾತ್ಮಕವಾದ ರಥದ ಮಾದರಿಯಲ್ಲಿ ಕಟ್ಟಿಗೆಯನ್ನು ಪೇರಿಸಿಡಲಾಗುತ್ತದೆ. ತುದಿಯಲ್ಲಿ ಶಿಖರ, ಪತಾಕೆಯನ್ನಿರಿಸಿ ಸಿಂಗರಿಸಲಾಗುತ್ತದೆ ಎಂದು‌ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ಮೋಹನ್ ಭಟ್, ವಾಸುದೇವ ಆಚಾರ್ಯ, ನಂದನ್ ಜೈನ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here