ಉಡುಪಿ: ಮಂಗಳೂರಿನ ಮಸಾಜ್ ಪಾರ್ಲರಿಗೆ ದಾಳಿ ಮಾಡಿದವರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಉಡುಪಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಪಾರ್ಲರ್ ಮೇಲೆ ದಾಳಿಯಾಗಿದೆ ಎಂಬುವುದು ಗೊತ್ತಿಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕಿದೆ. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದರು.
ಮಸಾಜ್ ಪಾರ್ಲರ್ ಗೆ ದಾಳಿ ಮಾಡಿದವರು ಯಾರು ಎಂದು ಗುರುತಿಸುತ್ತೇವೆ. ಅವರ ಮೇಲೆ ಏನು ಕ್ರಮ ತೆಗೆದುಕೊಳ್ಳಬೇಕು ಇಲಾಖೆ ತೆಗೆದುಕೊಳ್ಳಲಿದೆ. ಅನೈತಿಕ ಕಾರ್ಯಾಚರಿಸುವ ಪಾರ್ಲರ್ ಗಳಿದ್ದರೆ ದೂರು ಕೊಡಿ. ಅದು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ದೂರು ಕೊಟ್ಟರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಕಾರ್ಪೊರೇಷನ್ ಅವರು ಟ್ರೇಡ್ ಲೈಸೆನ್ಸ್ ಕೊಟ್ಟಿರುತ್ತಾರೆ. ಯಾವ ಕಂಡೀಶನ್ ಹಾಕಿ ಕೊಟ್ಟಿರುತ್ತಾರೆ ಅದನ್ನು ಪಾಲಿಸದಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ. ನಿಯಮಾವಳಿಗಳನ್ನು ಮೀರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.