Saturday, October 24, 2026

ಕಾರ್ಕಳದಲ್ಲಿ ಅ. 24ರಂದು ‘ವಿಜೇತೋತ್ಸವ–2026’ ಜನಪದ ನೃತ್ಯೋತ್ಸವ ಸ್ಪರ್ಧೆ

Must read

ಉಡುಪಿ: ಕರ್ನಾಟಕ ರಾಜ್ಯದಲ್ಲೇ ಪ್ರಥಮ ಬಾರಿಗೆ ವಿಶೇಷ ಶಾಲೆಗಳ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಾಗಿ ರಾಜ್ಯಮಟ್ಟದ ಜನಪದ ನೃತ್ಯೋತ್ಸವ ಸ್ಪರ್ಧೆ ‘ವಿಜೇತೋತ್ಸವ–2026’ ಅನ್ನು ಅಕ್ಟೋಬರ್ 24ರಂದು ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘದ ಕಾರ್ಯಾಧ್ಯಕ್ಷ ಡಾ. ಕಾಂತಿ ಹರೀಶ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತನೇ ವರ್ಷದ ಸಂಭ್ರಮದಲ್ಲಿರುವ ವಿಜೇತ ವಸತಿಯುತ ಶಾಲೆ, ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘ, ಉಡುಪಿ ಜಿಲ್ಲಾ ಪಾಲಕರ ಸಂಘ, ಕ್ರಿಯೇಟಿವ್ ಪಿಯು ಕಾಲೇಜು ಹಾಗೂ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಅಕಾಡೆಮಿಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ರಾಜ್ಯದ ಸುಮಾರು 30 ವಿಶೇಷ ಶಾಲೆಗಳು ಈಗಾಗಲೇ ಸ್ಪರ್ಧೆಗೆ ನೋಂದಾಯಿಸಿಕೊಂಡಿವೆ. ವಿಜೇತ ತಂಡಕ್ಕೆ ₹25,000, ದ್ವಿತೀಯ ಸ್ಥಾನಕ್ಕೆ ₹20,000 ಹಾಗೂ ತೃತೀಯ ಸ್ಥಾನಕ್ಕೆ ₹15,000 ನಗದು ಬಹುಮಾನ ನೀಡಲಾಗುವುದು. ಅಲ್ಲದೆ, ತಲಾ ₹5,000 ಮೊತ್ತದ ಮೂರು ಸಮಾಧಾನಕರ ಬಹುಮಾನಗಳನ್ನು ವಿತರಿಸಲಾಗುವುದು. ಬಹುಮಾನಗಳೊಂದಿಗೆ ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಉಳಿದ ಎಲ್ಲ ತಂಡಗಳಿಗೂ ತಲಾ ₹3,000 ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಅಂದು ಬೆಳಿಗ್ಗೆ 9.30ಕ್ಕೆ ನಿವೃತ್ತ ಚಾರ್ಟರ್ಡ್ ಅಕೌಂಟೆಂಟ್ ಕಮಲಾಕ್ಷ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕ್ರಿಯೇಟಿವ್ ಪಿಯು ಕಾಲೇಜಿನ ಸ್ಥಾಪಕರು ಹಾಗೂ ಪ್ರಾಂಶುಪಾಲರಾದ ಗಣಪತಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹಾಗೂ ಕಾರ್ಕಳ ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಜೇತ ವಿಶೇಷ ಶಾಲೆಯ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ರತ್ನಾ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕ್ರಿಯೇಟಿವ್ ಪಿಯು ಕಾಲೇಜಿನ ಸ್ಥಾಪಕರಾದ ಗಣನಾಥ್ ಶೆಟ್ಟಿ ಹಾಗೂ ಅಶ್ವಥ್ ಎಸ್.ಎಲ್., ತುಳುನಾಡ ತುಳುವೆರ್ ಕೂಟದ ಆಶಾ ಹರೀಶ್, ಉಡುಪಿ ಜಿಲ್ಲಾ ಪಾಲಕರ ಸಂಘದ ಅಧ್ಯಕ್ಷ ಜಯವಿಠಲ್, ವಿಕಲಚೇತನ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಸೋಮನಾಥ್ ಮಹಾಜನ್ ಶೆಟ್ಟರ್, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕರ ಮತ್ತು ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷ ಆಗ್ನೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ ಹಾಗೂ ಅಧ್ಯಕ್ಷೆ ಸೌಮ್ಯ ಕೆ.ವಿ. ಉಪಸ್ಥಿತರಿರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ವಸಂತ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ಪಾಲಕರ ಸಂಘದ ಅಧ್ಯಕ್ಷ ಜೈವಿಠಲ್, ಗೌರವಾಧ್ಯಕ್ಷೆ ಆಗ್ನೇಶ್ ಕುಂದರ್, ಸಂಘದ ರಾಜ್ಯ ಉಪಾಧ್ಯಕ್ಷ ರವೀಂದ್ರ ಎಚ್. ಹಾಗೂ ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here