ಉಡುಪಿ: ಉಡುಪಿ ವಕೀಲರ ಸಂಘದ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರವು, ಉಡುಪಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಮಾತನಾಡಿ, ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುವ ವಕೀಲರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ಇಂದಿನ ಒತ್ತಡದ ಬದುಕಿನಲ್ಲಿ ವಕೀಲರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಖಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬ ಅಂಶವು ವೈದ್ಯಕೀಯ ವರದಿಯಿಂದ ಬಯಲಾಗಿದೆ. ಹೀಗಾಗಿ ವಕೀಲರು ವೈದ್ಯರ ಸಲಹೆಗಳನ್ನು ಪಡೆದು ಆರೋಗ್ಯವಂತರಾಗಿರಿ ಎಂದು ಸಲಹೆ ನೀಡಿದರು.
ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಕೆ.ಎಮ್.ಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಶುಭ ಹಾರೈಸಿದರು. ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಕಿರಣ್.ಎಸ್.ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್ ಎ.ಆರ್ ವಂದಿಸಿದರು. ನ್ಯಾಯಲಯದ ಸಿಬ್ಬಂದಿ ಶಾಂಭವಿ ಪ್ರಾರ್ಥಿಸಿ, ನ್ಯಾಯವಾದಿ ಸಹನಾ ಕುಂದರ್ ನಿರೂಪಿಸಿದರು.
ಇದೇ ವೇಳೆ ಉಡುಪಿ ವಕೀಲರ ಸಂಘದ ಸದಸ್ಯರಿಗೆ ವಿಶೇಷ ಆರೋಗ್ಯ ಕಾರ್ಡ್ – ಉಡುಪಿ ಲಾಯರ್ ಪ್ರಿವಿಲೆಜ್ ಕಾರ್ಡ್ ವಿತರಿಸಲಾಯಿತು. ನ್ಯಾಯವಾದಿಗಳು ರಕ್ತದಾನ ಮಾಡಿದರು. ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರನ್ನು ಉಡುಪಿ ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.