ಉಡುಪಿ: ಡೆತ್ ನೋಟ್ ಬರೆದಿಟ್ಟು ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಕೊರಂಗ್ರಪಾಡಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೊರಂಗ್ರಪಾಡಿ ನಿವಾಸಿ ವಸಂತ ಕೋಟ್ಯಾನ್(59) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವಸಂತ್ ಅವರು, ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರು ಬರೆದಿಟ್ಟಿರುವ ಚೀಟಿ ಪೋಲಿಸರಿಗೆ ಲಭ್ಯವಾಗಿದೆ.
ಡೆತ್ ನೋಟ್ ಸಾರಾಂಶ ಹೀಗಿದೆ:
“ಇತ್ತೀಚಿನ ದಿನಗಳಲ್ಲಿ ನನಗೆ ಜೀವನವೇ ಬೇಡ ಎಂದು ತೀರ್ಮಾನಿಸಿದೆ. ನನ್ನ ಬಗ್ಗೆಯ ಅಪಪ್ರಚಾರದಿಂದ ನನ್ನ ಸಂಬಂಧಿಕರು ದೂರಾದರು. ಅದಕ್ಕೆ ಕಾರಣ ಹೆಂಡತಿ ಹಾಗೂ ಆಕೆಯ ಸ್ನೇಹಿತರು. ಆದರೆ ಹೆಂಡತಿಗೆ ಯಾವ ಶಿಕ್ಷೆಯು ಬೇಡ. ಆಕೆ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳಲಿ” ಎಂದು ಉಲ್ಲೇಖಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪಿ.ಎಸ್.ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ನೇತ್ರಾವತಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಸ್ಪತ್ರೆಗೆ ಸಾಗಿಸಲು ನೆರವಾದರು.