ಉಡುಪಿ: ಉಡುಪಿ ತಾಲೂಕಿನಾದ್ಯಂತ ಧಾರಾಕಾರ ಮಳೆ ಮುಂದುವರೆದಿದ್ದು, ಬೈಲಕೆರೆ, ಕಲ್ಸಂಕ ಹಾಗೂ ಮಠದಬೆಟ್ಟು ಪ್ರದೇಶ ಜಲಾವೃತಗೊಂಡಿವೆ. ಗುಂಡಿಬೈಲುವಿನಲ್ಲಿ ನೆರೆ ನೀರು ಮನೆ ಮತ್ತು ಅಂಗಡಿಗಳಿಗೆ ನುಗ್ಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ನೆರೆಪೀಡಿತ ಜನರನ್ನು ರಕ್ಷಣೆ ಮಾಡಿದರು.
ಅಗ್ನಿಶಾಮಕ ದಳ ರಕ್ಷಣಾ ಕಾರ್ಯಚರಣೆ ನಡೆಸಿ ಒಂದೇ ಮನೆಯ ಮೂವರನ್ನು ರಕ್ಷಣೆ ಮಾಡಿತು. ಉಳಿದಂತೆ ಪಾಡಿಗಾರು ಸಮೀಪ ನಾಲ್ಕು ಮನೆಗಳಿಂದ ಜನರನ್ನು ಎತ್ತರ ಪ್ರದೇಶಕ್ಕೆ ಶಿಫ್ಟ್ ಮಾಡಲಾಯಿತು. ಪೊಲೀಸ್, ಅಗ್ನಿಶಾಮಕ ದಳದ ಜೊತೆಗೆ ಸಾರ್ವಜನಿಕರು ಕೂಡ ರಕ್ಷಣಾ ಕಾರ್ಯದಲ್ಲಿ ಭಾಗಿಯಾದರು. ಗುಂಡಿಬೈಲುವಿನಲ್ಲಿ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಸ್ಥಳಕ್ಕೆ ನಗರಸಭೆ ಆಯುಕ್ತ ರಾಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.