ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದು ಏಕಾಏಕಿಯಾಗಿ ಹೊತ್ತಿ ಉರಿದ ಘಟನೆ ಮಣಿಪಾಲ ಎಂಐಟಿ ಬಸ್ ನಿಲ್ದಾಣದ ಬಳಿ ಗುರುವಾರ ತಡರಾತ್ರಿ ಸಂಭವಿಸಿದೆ. ಕಾರಿನೊಳಗೆ ಮಲಗಿದ್ದ ಇಬ್ಬರು ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಕುಂದಾಪುರದಿಂದ ಕೆಎಂಸಿ ಆಸ್ಪತ್ರೆಗೆ ಬಂದ ರೋಗಿಗಳ ಕಡೆಯವರ ಕಾರು ಎಂದು ತಿಳಿದುಬಂದಿದೆ. ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ ಬಳಿಕ ಇಬ್ಬರು ಮಣಿಪಾಲ ಎಂಐಟಿ ಬಸ್ ನಿಲ್ದಾಣಕ್ಕಿಂತ ಸ್ವಲ್ಪ ಕೆಳಗೆ ಇಳಿಜಾರಿನಲ್ಲಿ ಕಾರನ್ನು ನಿಲ್ಲಿಸಿ ಒಳಗಡೆ ಮಲಗಿದ್ದರು ಎನ್ನಲಾಗಿದೆ. ಸುಮಾರು ತಡರಾತ್ರಿ 1.45 ರ ವೇಳೆಗೆ ಏಕಾಏಕಿಯಾಗಿ ಕಾರಿಗೆ ಬೆಂಕಿ ಹತ್ತಿಕೊಂಡದ್ದು, ತಕ್ಷಣವೇ ಇಬ್ಬರೂ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಧಗಧಗವಾಗಿ ಹೊತ್ತಿಉರಿಯುತ್ತಿದ್ದಂತೆ ಹ್ಯಾಂಡ್ ಬ್ರೇಕ್ ಮುಕ್ತವಾದ ಕಾರು ಹಿಮ್ಮುಖವಾಗಿ ಚಲಿಸಿದೆ. ಹೀಗೆ ಹಿಂದಕ್ಕೆ ಚಲಿಸುತ್ತಿದ್ದ ಕಾರನ್ನು ನಿನ್ನೆ ಗಾಳಿ ಮಳೆಗೆ ಮುರಿದು ಬಿದ್ದ ಮರದ ಗೆಲ್ಲೊಂದು ತಡೆದಿದೆ. ಇದರಿಂದ ಸಂಭವನೀಯ ಅನಾಹುತವೊಂದು ತಪ್ಪಿದೆ. ಬಳಿಕ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.