ಉಡುಪಿ: ಕಾನೂನಿನ ಚೌಕಟ್ಟಿನಲ್ಲಿ ಎಷ್ಟೇ ದೊಡ್ಡವರಿದ್ದರೂ ಕೂಡ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕೆ ಸಿಗುತ್ತದೆ. ನಮ್ಮ ಸರಕಾರಕ್ಕೆ ಯಾವ ಭಾಗದಿಂದಲೂ ಒತ್ತಡವಿಲ್ಲ. ಯಾರ ಒತ್ತಡಕ್ಕೂ ಸರಕಾರ ಮಣಿಯುವುದಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದ ಕಾನೂನು ಎಲ್ಲರಿಗೂ ಒಂದೇ. ಅದು ಸೆಲೆಬ್ರಿಟಿ ಆಗಿರಲಿ, ರಾಷ್ಟ್ರಪತಿ ಆಗಿರಲಿ ಅಥವಾ ಮಾರುಕಟ್ಟೆಯಲ್ಲಿ ಪಂಕ್ಚರ್ ಹಾಕುವವನಾಗಿರಲಿ, ಎಲ್ಲರಿಗೂ ಕಾನೂನು ಒಂದೇ. ಕಾನೂನಿನ ಚೌಕಟ್ಟಿನಲ್ಲಿ ಎಷ್ಟೇ ಪ್ರಸಿದ್ಧಿಯಾಗಿರಲಿ, ಎಷ್ಟೇ ದೊಡ್ಡವರು ಇದ್ದರೂ ಕೂಡ ಯಾರನ್ನು ಬಿಡುವ ಪ್ರಮೇಯವೆ ಇಲ್ಲ. ಇದು ಸ್ಪಷ್ಟ ಎಂದರು.
ಏನೇ ಅನ್ಯಾಯ ಆಗಿದ್ದರೂ ಕೂಡ ಕಾನೂನಿನ ಪರಿಮಿತಿಯಲ್ಲಿ ಯಾವ ಶಿಕ್ಷೆಯಾಗಬೇಕೊ ಅದು ಕಂಡಿತಾ ಆಗುತ್ತೆ. ರೇಣುಕಾ ಸ್ವಾಮಿಯ ಪತ್ನಿ ಹಾಗೂ ಕುಟುಂಬದ ಜೊತೆ ಸರಕಾರ ನಿಲ್ಲುತ್ತೆ, ಆರ್ಥಿಕವಾಗಿಯೂ ನಿಲ್ಲುತ್ತೆ ಎಂದು ಹೇಳಿದರು.