Tuesday, September 17, 2024

ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 16.85 ಕೋಟಿ ರೂ. ಲಾಭ: ಜಯಕರ ಶೆಟ್ಟಿ ಇಂದ್ರಾಳಿ

Must read

ಉಡುಪಿ: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2023-24ನೇ ಸಾಲಿನಲ್ಲಿ 2378.78 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 16.85 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಉಡುಪಿ ಡಯಾನ ಹೋಟೆಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸಂಘವು 2023-24 ಆರ್ಥಿಕ ವರ್ಷಾಂತ್ಯಕ್ಕೆ 18,307 ಸದಸ್ಯರಿಂದ 4.77 ಕೋ. ರೂ ಪಾಲು ಬಂಡವಾಳ ಹೊಂದಿದೆ. ವರದಿ ವರ್ಷಾಂತ್ಯಕ್ಕೆ ಸಂಘವು ಒಟ್ಟು ರೂ.506.64 ಕೋಟಿ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ ಶೇ.12.23 ಏರಿಕೆ ಕಂಡಿದೆ ಎಂದರು.

ಸದಸ್ಯರಿಗೆ ಗೃಹನಿರ್ಮಾಣ, ವಾಹನ ಖರೀದಿ, ಜಮೀನು ಖರೀದಿ ಮತ್ತು ಅಭಿವೃದ್ಧಿ, ವಾಣಿಜ್ಯ ಸಂಕೀರ್ಣ ಹಾಗೂ ವಸತಿ ಸಮುಚ್ಚಯ ನಿರ್ಮಾಣ, ಸ್ವಉದ್ಯೋಗ, ವಿದ್ಯಾಭ್ಯಾಸ, ಮದುವೆ, ಚಿನ್ನಾಭರಣಗಳ ಈಡಿನ ಮೇಲೆ ಹಾಗೂ ಮನೆವಾರ್ತೆಗಳಿಗೆ ಸೂಕ್ತ ದಾಖಲೆಗಳನ್ನು ಪಡೆದುಕೊಂಡು ಸಾಲ ವಿತರಿಸುತ್ತಿದೆ. ವರದಿ ವರ್ಷಾಂತ್ಯಕ್ಕೆ 400.68 ಕೋ.ರೂ ಸದಸ್ಯರ ಹೊರಬಾಕಿ ಸಾಲ ಇರುತ್ತದೆ. 84.40 ಕೋ.ರೂ ನಿಧಿಗಳು ಇದ್ದು, ರೂ.591.05 ಕೋಟಿ ದುಡಿಯುವ ಬಂಡವಾಳ ಆಗಿರುತ್ತದೆ. ತನ್ನ ಕಾರ್ಯಕ್ಷೇತ್ರದಲ್ಲಿ 11 ಶಾಖೆಗಳನ್ನು ಹೊಂದಿದ್ದು, ಈ ಪೈಕಿ 8 ಶಾಖೆಗಳು ಸಂಘದ ಸ್ವಂತ ನಿವೇಶನ ಹೊಂದಿರುತ್ತದೆ ಎಂದು ಮಾಹಿತಿ ನೀಡಿದರು.

ಸತತವಾಗಿ 2 ಬಾರಿ ರಾಷ್ಟ್ರ ಪ್ರಶಸ್ತಿ, 8 ಬಾರಿ ರಾಜ್ಯ ಮಟ್ಟದ ಪ್ರಶಸ್ತಿ, 17 ಬಾರಿ ಅವಿಭಜಿತ ದ.ಕ ಜಿಲ್ಲಾ ಪ್ರಶಸ್ತಿಗಳನ್ನು ಪಡೆದು ಯಶಸ್ವೀ ಕ್ರೆಡಿಟ್ ಸೊಸೈಟಿಯಾಗಿ ಸಂಘವು ಗುರುತಿಸಿಕೊಂಡಿದೆ. ಕೇವಲ ವ್ಯವಹಾರ ಮಾಡಿ ಲಾಭ ಗಳಿಸುವ ದೃಷ್ಟಿಯನ್ನು ಮಾತ್ರ ಇಟ್ಟುಕೊಳ್ಳದೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ವಾರ್ಷಿಕ ಸುಮಾರು 20 ಲಕ್ಷ ರೂ.ಯಷ್ಟು ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಾ ಬಂದಿದೆ. ಪ್ರಸ್ತುತ ಉಡುಪಿ ಜಿಲ್ಲೆಯಾದ್ಯಂತ 11 ಶಾಖೆಗಳನ್ನು ಹೊಂದಿ ವ್ಯವಹರಿಸುತ್ತಿದೆ ಎಂದರು.

ಚೇತನಾ ಮೊಬೈಲ್ ಆ್ಯಪ್:
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಮೂಲಕ ಗ್ರಾಹಕರು ತಾವಿರುವಲ್ಲಿಯೇ ತಮ್ಮ ಖಾತೆಯಿಂದ IMPS/NEFT/RTGS ಮೂಲಕ ಮೊಬಲಗು ವರ್ಗಾವಣೆ, RD ಹಾಗೂ ಸಾಲ ಖಾತೆಗಳಿಗೆ ಮೊಬಲಗು ವರ್ಗಾಯಿಸುವುದು. ಸಂಘದ ನೂತನ ಯೋಜನೆಯ ಕುರಿತಾದ ಮಾಹಿತಿಗಳನ್ನೂ ಪಡೆಯಬಹುದಾಗಿದ್ದು, ಸದ್ರಿ ಆ್ಯಪ್ ಬಗ್ಗೆ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆತಿರುತ್ತದೆ. ಗೂಗಲ್ ಪ್ಲೇ- ಸ್ಪೋರ್‌ನಲ್ಲಿ ಲಭ್ಯವಿರುವ ಈ ಆ್ಯಪ್‌ನ ಪ್ರಯೋಜನ ಪಡೆಯುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಗೆ ತೆರಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್ ಸೌಲಭ್ಯ, ಇ-ಸ್ಟಾಂಪಿಂಗ್, ಪಾನ್ ಕಾರ್ಡ್, NEFT/RTGS ಸೇವಾ ಸೌಲಭ್ಯ, ಮನಿ ಟ್ರಾನ್ಸ್‌ಫ‌ರ್ ಸೌಲಭ್ಯ ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ, ಸಾಮಾನ್ಯ ವಿಮೆ, “0” ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್‌ಕಾಲ್ ಸರ್ವಿಸ್, ಉಚಿತ ಎಸ್.ಎಂ.ಎಸ್ ಸೌಲಭ್ಯ ನೀಡುತ್ತಿದ್ದು, ಸದಸ್ಯ ಗ್ರಾಹಕರು ಈ ಎಲ್ಲಾ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮುಂದಿನ ವರದಿ ವರ್ಷದಲ್ಲಿ ರೂ.600 ಕೋಟಿ ಠೇವಣಿ, ರೂ.500 ಕೋಟಿ ಹೊರಬಾಕಿ ಸಾಲ ನೀಡುವ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಉಡುಪಿಯ ಹೃದಯ ಭಾಗದಲ್ಲಿ ಖರೀದಿಸಿರುವ 1 ಎಕ್ರೆ ಆಸ್ತಿಯಲ್ಲಿ ಅಂದಾಜು ರೂ.10 ಕೋಟಿ ವೆಚ್ಚದಲ್ಲಿ “ಸಹಕಾರ ಸೌಧ” ನಿರ್ಮಾಣದ ಯೋಜನೆಯನ್ನು ಹಮ್ಮಿಕೊಂಡಿರುತ್ತೇವೆ. ಸಂಘದ ಸದಸ್ಯ ಗ್ರಾಹಕರಿಗೆ ಉಪಯುಕ್ತವಾಗುವ ಹೊಸ ಹೊಸ ಯೋಜನೆಗಳನ್ನು ಮುಂದಿನ ದಿನಗಳಲ್ಲಿ ಅನುಷ್ಠಾನ ಮಾಡುವ ಚಿಂತನೆಯನ್ನು ಹಮ್ಮಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುಯೆಲ್, ಆಡಳಿತ ಮಂಡಳಿಯ ಸದಸ್ಯರಾದ ಪುರುಷೋತ್ತಮ ಪಿ. ಶೆಟ್ಟಿ, ಉಮಾನಾಥ ಎಲ್, ವಿನಯ ಕುಮಾರ್ ಟಿ.ಎ, ಪದ್ಮನಾಭ ನಾಯಕ್, ಸೈಯದ್ ಅಬ್ದುಲ್ ರಜಾಕ್, ಸದಾಶಿವ ನಾಯ್ಕ, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಗಾಯತ್ರಿ ಎಸ್. ಭಟ್, ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ಉಪಸ್ಥಿತರಿದ್ದರು

spot_img

More articles

LEAVE A REPLY

Please enter your comment!
Please enter your name here