Saturday, July 27, 2024

ಫೆ.11ರಂದು ಮಣಿಪಾಲ ಮ್ಯಾರಥಾನ್: ಕೀನ್ಯಾ, ಅಮೆರಿಕ ಸೇರಿ 8 ದೇಶಗಳ ಸ್ಪರ್ಧಿಗಳು ಭಾಗಿ

Must read

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಸಂಸ್ಥೆಯು ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್‌ನ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮಣಿಪಾಲ ಮ್ಯಾರಥಾನ್‌ನ ಆರನೇ ಆವೃತ್ತಿ ಫೆ.11ರಂದು ಮಣಿಪಾಲದಲ್ಲಿ ನಡೆಯಲಿದೆ. ಈ ಬಾರಿ ವಿವಿಧ ವಿಭಾಗಗಳಲ್ಲಿ ದೇಶ- ವಿದೇಶಗಳ ಸುಮಾರು 15,000ದಷ್ಟು ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ಮಣಿಪಾಲ ಮಾಹೆಯ ಪ್ರೊ. ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ತಿಳಿಸಿದ್ದಾರೆ.

ಮಣಿಪಾಲದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಮೆರಿಕ, ಜಪಾನ್, ಫ್ರಾನ್ಸ್, ಟರ್ಕಿ ಸೇರಿ ಒಟ್ಟು ಎಂಟು ದೇಶಗಳ 100ಕ್ಕೂ ಅಧಿಕ ಮಂದಿ ಮಣಿಪಾಲ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಉಳಿದಂತೆ ಇಥಿಯೋಪಿಯಾ, ಕೀನ್ಯಾ, ಜರ್ಮನಿ, ಇಂಗ್ಲಂಡ್ ಹಾಗೂ ಆಸ್ಟ್ರೇಲಿಯಾಗಳಿಂದಲೂ ದೂರದ ಓಟಗಾರರು ಭಾಗವಹಿಸುವರು ಎಂದರು.

ಮಣಿಪಾಲದಲ್ಲಿ ಪೂರ್ಣ ಮ್ಯಾರಥಾನ್ (42.195ಕಿ.ಮೀ.), ಹಾಫ್ ಮ್ಯಾರಥಾನ್ (21.098), 10ಕಿ.ಮೀ, 5ಕಿ.ಮೀ, 3ಕಿ.ಮೀ. ವಿಭಾಗಗಳಲ್ಲಿ ನಡೆಯಲಿದೆ. ಅಲ್ಲದೇ 3 ಕಿ.ಮೀ.ನ ಫನ್ ರೇಸ್ ಸಹ ನಡೆಯಲಿದೆ. ಮೊದಲೆರಡು ವಿಭಾಗಗಳನ್ನು ಬಿಟ್ಟು ಉಳಿದ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ವಯೋವರ್ಗಗಳೂ ಸೇರಿದಂತೆ ವಿವಿಧ ಉಪವಿಭಾಗಗಳಿರುತ್ತವೆ. ಪೂರ್ಣ ಮ್ಯಾರಥಾನ್ ಫೆ.11ರ ಮುಂಜಾನೆ 5 ಗಂಟೆಗೆ ಮಣಿಪಾಲ ಗ್ರೀನ್ಸ್‌ನಿಂದ ಪ್ರಾರಂಭಗೊಳ್ಳಲಿದೆ. ಬಳಿಕ ಹಂತ ಹಂತವಾಗಿ ಉಳಿದ ಸ್ಪರ್ಧೆಗಳಿಗೆ ಹಸಿರು ನಿಶಾನೆ ತೋರಲಾಗುವುದು ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಮೂಲಕ ಸುಮಾರು 200 ಮಂದಿ ಅಂಧರು ಹಾಗೂ ಕರ್ನಾಟಕದ ವಿವಿಧೆಡೆಗಳಿಂದ ಸುಮಾರು 150 ಮಂದಿ ವಿಶೇಷ ಚೇತನರು ಮಣಿಪಾಲ ಮ್ಯಾರಥಾನ್‌ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಒಬ್ಬರು ಪೂರ್ಣ ಮ್ಯಾರಥಾನ್ (42.19ಕಿ.ಮೀ.) ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ಇಬ್ಬರು ಹಾಫ್ ಮ್ಯಾರಥಾನ್ (21.098ಕಿ.ಮೀ.)ನಲ್ಲಿ ಆರು ಮಂದಿ 10ಕಿ.ಮೀ. ಓಟದಲ್ಲಿ ಭಾಗವಹಿಸಲಿದ್ದಾರೆ. ಉಳಿದವರು ಇತರ ಸ್ಪರ್ಧೆಯಲ್ಲಿ ಸ್ಪರ್ಧಿಸುವರು ಎಂದು ವಿವರಿಸಿದರು.

21 ಲಕ್ಷ ರೂ. ಬಹುಮಾನ :
ಮ್ಯಾರಥಾನ್‌ನಲ್ಲಿ ವಿವಿಧ ವಿಭಾಗಗಳ ವಿಜೇತರಿಗೆ ಒಟ್ಟು 21 ಲಕ್ಷರೂ. ಮೊತ್ತವನ್ನು ಬಹುಮಾನವಾಗಿ ನೀಡಲಾಗುತ್ತದೆ. ಪೂರ್ಣ ಮ್ಯಾರಥಾನ್‌ನ ಮೊದಲ ಮೂರು ಸ್ಥಾನಿಗಳಿಗೆ ಕ್ರಮವಾಗಿ 50ಸಾವಿರ, 30ಸಾವಿರ, 20 ಸಾವಿರ ಬಹುಮಾನವಿದ್ದರೆ, ಹಾಫ್ ಮ್ಯಾರಥಾನ್‌ಗೆ 30ಸಾವಿರ, 20ಸಾವಿರ, 10ಸಾವಿರ ರೂ.ನಗದು ಬಹುಮಾನವಿದೆ.
ಉಳಿದಂತೆ 10ಕಿ.ಮೀ. ವಿಜೇತರಿಗೆ 15,000ರೂ., 5ಕಿ.ಮೀ. ವಿಜೇತರಿಗೆ 7,000ರೂ., 3ಕಿ.ಮೀ. ವಿಜೇತರಿಗೆ 4,000ರೂ. ನಗದು ಬಹುಮಾನ ನೀಡಲಾಗುವುದು. ಈ ಬಾರಿ ಸ್ಪರ್ಧೆ ವಿಜೇತರನ್ನು ಘೋಷಿಸುತಿದ್ದಂತೆ ಬಹುಮಾನ ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಹೆಯ ಉಪಕುಲಪತಿ ಡಾ. ಎಂ.ಡಿ. ವೆಂಕಟೇಶ್, ಸಹ ಉಪಕುಲಪತಿಗಳಾದ ಡಾ.ಶರತ್ ರಾವ್, ರಿಜಿಸ್ಟ್ರಾರ್ ಡಾ.ಗಿರಿಧರ್ ಕಿಣಿ, ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆಂಪರಾಜ್, ಡಾ.ಗಿರೀಶ್ ಮೆನನ್, ಡಾ.ನವೀನ್ ಸಾಲಿಸ್, ಡಾ.ಅವಿನಾಶ್ ಶೆಟ್ಟಿ, ಡಾ. ವಿನೋದ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here