ಚೆನ್ನೈ: ಸಿನಿಮಾ ರಂಗದಲ್ಲಿ ತನ್ನದೆ ಛಾಪು ಮೂಡಿಸಿರುವ ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ಇದೀಗ ರಾಜಕೀಯ ರಂಗಕ್ಕೆ ಕಾಲಿಟ್ಟಿದ್ದಾರೆ.
ಲೋಕಸಭೆ ಚುನಾವಣೆಗೆ ಇನ್ನೇನು ತಿಂಗಳುಗಳು ಬಾಕಿ ಇರುವಾಗಲೇ ವಿಜಯ್ ಅವರು, ‘ತಮಿಳಗ ವೆಟ್ರಿ ಕಳಗಂ’ ಎಂಬ ಹೆಸರಿನ ತಮ್ಮ ರಾಜಕೀಯ ಪಕ್ಷವನ್ನು ಇಂದು ಘೋಷಿಸಿದರು. ಆ ಮೂಲಕ ರಾಜಕೀಯಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ.
ಕಳೆದ ವಾರವಷ್ಟೇ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಅವರ ಅಭಿಮಾನಿಗಳ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ’ ರಾಜಕೀಯ ಪಕ್ಷದ ರಚನೆಗೆ ಒಪ್ಪಿಗೆ ನೀಡಿತ್ತು. ಅದರಂತೆ ಇಂದು ತಮ್ಮ ನೂತನ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ನಟ ವಿಜಯ್, ನಮ್ಮ ಪಕ್ಷ ‘ತಮಿಳಗ ವೆಟ್ರಿ ಕಳಗಂ’ ನ್ನು ನೋಂದಾಯಿಸಲು ಚುನಾವಣಾ ಆಯೋಗಕ್ಕೆ ಇಂದು ಅರ್ಜಿ ಸಲ್ಲಿಸುತ್ತಿದ್ದೇವೆ.
ಮುಂಬರುವ ಚುನಾವಣೆಯಲ್ಲಿ ನಾವು ಭಾಗವಹಿಸುವುದಿಲ್ಲ. ಅಲ್ಲದೆ ಯಾವುದೇ ಪಕ್ಷದ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2026 ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಾಧನೆಯನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ ಎಂದು ತಿಳಿಸಿದ್ದಾರೆ.