ದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದೆ. ಇದರಿಂದ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಉಂಟಾಗಿದೆ.
ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ ನೊಂದಿಗಿನ ಸೀಟು ಹಂಚಿಕೆ ಮಾತುಕತೆಯು ವಿಫಲಗೊಂಡಿರುವುದರಿಂದ ಮಮತಾ ಬ್ಯಾನರ್ಜಿ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ನಾನು ಅವರಿಗೆ ನೀಡಿದ ಎಲ್ಲ ಪ್ರಸ್ತಾವನೆಗಳನ್ನೂ ಅವರು ತಿರಸ್ಕರಿಸಿದ್ದಾರೆ. ಹೀಗಾಗಿ ನಾವು ಪಶ್ಚಿಮ ಬಂಗಾಳದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೊ ನ್ಯಾಯ ಯಾತ್ರೆಯ ಯೋಜನೆಯ ಕುರಿತು ಕಾಂಗ್ರೆಸ್ ತನಗೆ ಮಾಹಿತಿಯನ್ನೇ ನೀಡಿಲ್ಲ ಎಂದೂ ಟಿಎಂಸಿ ವರಿಷ್ಠೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೌಜನ್ಯಕ್ಕಾದರೂ ಅವರು ಪಶ‍್ಚಿಮ ಬಂಗಾಳದಲ್ಲಿನ ಯಾತ್ರೆ ಕುರಿತು ನನಗೆ ಮಾಹಿತಿ ನೀಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.