ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಕೃಷ್ಣಮಠದ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ತಮ್ಮ ಐತಿಹಾಸಿಕ ನಾಲ್ಕನೇ ಪರ್ಯಾಯವನ್ನು ಆರಂಭಿಸಿದರು. ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು ಪುತ್ತಿಗೆ ಶ್ರೀಗಳನ್ನು ಸರ್ವಜ್ಞ ಪೀಠದಲ್ಲಿ ಕುಳ್ಳಿರಿಸಿ ಅನುಗ್ರಹಿಸಿದರು.
ಕಡೆಗೋಲು ಕೃಷ್ಣನೂರಿನಲ್ಲಿ ನಡೆದ ಈ ಸಂಭ್ರಮದ ಕಾರ್ಯಕ್ರಮಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಸಾಕ್ಷಿಯಾದರು.
ಗುರುವಾರ ನಸುಕಿನ 1.30ರ ವೇಳೆಗೆ ಕಾಪು ಸಮೀಪದ ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡಿ ಜೋಡುಕಟ್ಟೆಗೆ ಆಗಮಿಸಿದ ಪುತ್ತಿಗೆ ಶ್ರೀಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಅಲ್ಲಿಂದ ಜೋಡುಕಟ್ಟೆಗೆ ಆಗಮಿಸಿದ ಅವರು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಅವರನ್ನು ಮೆರವಣಿಗೆಯಲ್ಲಿ ರಥಬೀದಿಗೆ ಕರೆದೊಯ್ಯಲಾಯಿತು.
ಕನಕನ ಕಿಂಡಿಯಲ್ಲಿ ಶ್ರೀಕೃಷ್ಣನ ದರ್ಶನ ಮಾಡಿದ ಅವರು ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಾಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಕೃಷ್ಣ ಮಠ ಪ್ರವೇಶಿಸಿದ ಅವರು ಅಕ್ಷಯ ಪಾತ್ರೆಯನ್ನು ಸ್ವೀಕರಿಸಿ ಸರ್ವಜ್ಞ ಪೀಠವನ್ನು ಏರಿದರು. ಆ ಮೂಲಕ ಪುತ್ತಿಗೆ ಸುಗುಣೇಂದ್ರ ಸ್ವಾಮೀಜಿ ಅವರು ನಾಲ್ಕನೇ ಪರ್ಯಾಯ ಆರಂಭಿಸಿದರು.