Friday, September 20, 2024

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ರಿಕ್ಷಾ ಚಾಲಕನಿಗೆ 20 ವರ್ಷ ಜೈಲು ಶಿಕ್ಷೆ

Must read

ಉಡುಪಿ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಬ್ರಹ್ಮಾವರ ತಾಲೂಕಿನ ರಿಕ್ಷಾ ಚಾಲಕ ಕೇಶವ ನಾಯ್ಕ್(27) ಶಿಕ್ಷೆಗೆ ಗುರಿಯಾಗಿರುವ ಆರೋಪಿ. 13 ವರ್ಷದ ನೊಂದ ಬಾಲಕಿಯು ಶಾಲೆಗೆ ಆರೋಪಿಯ ರಿಕ್ಷಾದಲ್ಲಿ ಹೋಗಿ ಬರುತ್ತಿದ್ದು, ಇದರಿಂದ ಆತ ಬಾಲಕಿಯ ಮನೆಯವರೆಗೂ ಪರಿಚಯಸ್ಥನಾಗಿದ್ದನು. ನೊಂದ ಬಾಲಕಿಯನ್ನು ಪ್ರೀತಿಸುವುದಾಗಿ ತಿಳಿಸಿದ ಆತ, 2023ರ ಫೆ.17 ರಂದು ಆಕೆಯನ್ನು ಪುಸಲಾಯಿಸಿ ತನ್ನ ರಿಕ್ಷಾದಲ್ಲಿ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ನಡೆಸಿ ಅತ್ಯಾಚಾರ ಎಸಗಿದ್ದನು. ಈ ವಿಚಾರವನ್ನು ಯಾರಲ್ಲೂ ಹೇಳಬಾರದೆಂದು ಹೆದರಿಸಿದ್ದನು. ಅದರಂತೆ ಆಕೆ ಗರ್ಭವತಿಯಾಗಿದ್ದು, ಈ ಬಗ್ಗೆ ನೊಂದ ಬಾಲಕಿಯ ತಂದೆ ತಾಯಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಿನ ಪೊಲೀಸ್ ನಿರೀಕ್ಷಕ ಜಯಾನಂದ ಕೆ. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. 28 ಸಾಕ್ಷಿಗಳ ಪೈಕಿ ಅಭಿಯೋಜನೆ ಪರವಾಗಿ 16 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯವಾಗಿ ನೊಂದ ಬಾಲಕಿಯ ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿತು.

ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿ ದೋಷಿ ಎಂದು ಪರಿಗಣಿಸಿ ಅತ್ಯಾಚಾರ ಎಸಗಿರುವುದಕ್ಕೆ 20ವರ್ಷಗಳ ಕಠಿಣ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ಆದೇಶ ನೀಡಿದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here