Friday, November 15, 2024

ಮಟ್ಟುಗುಳ್ಳ, ಶಂಕರಪುರ ಮಲ್ಲಿಗೆಯ ಮಾರುಕಟ್ಟೆ ಅಭಿವೃದ್ಧಿಗೆ ಮಾಹೆಯಲ್ಲಿ ಸಂಶೋಧನ ಆಧಾರಿತ ಇನ್‌ಕ್ಯುಬೇಶನ್‌ ಸೌಲಭ್ಯ

Must read

ಮಣಿಪಾಲ: ವಿಶನ್‌ ಕರ್ನಾಟಕ ಫೌಂಡೇಶನ್‌ [ವಿಕೆಎಫ್‌] ಮತ್ತು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ] ಸಂಸ್ಥೆಗಳು ಭೌಗೋಳಿಕ ಸೂಚಿಗೆ ಹಚ್ಚಿಕೊಂಡಿರುವ [ ಜಿಯೋಗ್ರಾಫಿಕಲ್‌ ಇನ್‌ಡಿಕೇಶನ್‌- ಜಿಐ ಟ್ಯಾಗ್ಡ್‌] ಉತ್ಪನ್ನಗಳಿಗಾಗಿ ಸಂಶೋಧನ ಆಧಾರಿತ ಉದ್ಭವನ [ಇನ್‌ಕ್ಯುಬೇಶನ್‌] ವನ್ನು ಮಣಿಪಾಲದಲ್ಲಿ ಡಿಸೆಂಬರ್‌ 27ರಿಂದ ಆರಂಭಿಸಲಾಗಿದೆ.


ಜಿಐ-ಟ್ಯಾಗ್ಡ್‌ ಆಗಿರುವ ಉಡುಪಿ ಜಿಲ್ಲೆಯ ಸುತ್ತಮುತ್ತ ಇರುವ ಉಡುಪಿ ಮಟ್ಟುಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಬೆಳೆಯುವ ರೈತ ಸಮುದಾಯಗಳನ್ನು ಪ್ರೋತ್ಸಾಹಿಸುವುದು, ಜೀವನಮಟ್ಟವನ್ನು ವೃದ್ಧಿಸುವುದು ಇನ್‌ಕ್ಯುಬೇಶನ್‌ ಕಾರ್ಯಕ್ರಮದ ಉದ್ದೇಶಗಳಾಗಿವೆ.
ವಿಶನ್‌ ಕರ್ನಾಟಕ ಫೌಂಡೇಶನ್‌ [ವಿಕೆಫ್‌] ನ ಅಧ್ಯಕ್ಷ ಕಿಶೋರ್‌ ಜಾಗೀರ್‌ದಾರ್‌ ಅವರು ಮಾತನಾಡುತ್ತ, ’ಮಾಹೆಯ ವಾಣಿಜ್ಯ ವಿಭಾಗದ ಸಹಭಾಗಿತ್ವದಲ್ಲಿ ವಿಕೆಫ್‌ ಈ ಸಂಶೋಧನ ಆಧಾರಿತ ಸೌಲಭ್ಯ ಉಪಕ್ರಮ [ ಇನೀಶಿಯೇಟಿವ್‌ ಆಫ್‌ ರೀಸರ್ಚ್‌ ಬೇಸ್ಡ್‌ ಇನ್‌ಕ್ಯುಬೇಶನ್‌ ಫೆಸಿಲಿಟಿ] ವನ್ನು ಉದ್ಘಾಟಿಸಲು ಅಭಿಮಾನ ಪಡುತ್ತಿದೆ. ಜಿಐಯೊಂದಿಗೆ ಗುರುತಿಸಿಕೊಂಡಿರುವ, ವಿಶಾಲವಾದ ಮಾರುಕಟ್ಟೆಯನ್ನು ಹೊಂದಿರುವ ಸಮುದಾಯಗಳಿಗಾಗಿ ಉದ್ಭವನ [ಇನ್‌ಕ್ಯುಬೇಶನ್‌] ವ್ಯವಸ್ಥೆಯನ್ನು ಆರಂಭಿಸಿರುವುದು ಭಾರತದಲ್ಲಿಯೇ ಪ್ರಥಮವಾಗಿದೆ’ ಎಂದರು.


ಉದ್ಭವನ ವ್ಯವಸ್ಥೆ [ಇನ್‌ಕ್ಯುಬೇಶನ್‌ ಫೆಸಿಲಿಟಿ] ಯು ವ್ಯವಹಾರಮುದ್ರೆ [ಬ್ರ್ಯಾಂಡಿಂಗ್‌]. ಕಾನೂನು ವಿಚಾರಗಳು, ತರಗತೀಕರಣ [ಸ್ಟ್ಯಾಂಡರ್ಡೈಸೇಶನ್‌], ಮೌಲ್ಯವರ್ಧನೆ, ಗಣಕೀಕೃತ ಮಾರುಕಟ್ಟೆ [ಡಿಜಿಟಲ್‌ ಮಾರ್ಕೆಟ್‌ಪ್ಲೇಸ್‌]ಗಳ ಪರಿಶೀಲನೆ, ವ್ಯೂಹಾತ್ಮಕ ನಡೆಗಳು [ ಸ್ಟ್ರಾಟೇಜೀಸ್‌]- ಇಂಥ ಮಾರುಕಟ್ಟೆ ಕೇಂದ್ರಿತ ಚಟುವಟಿಕೆಗಳನ್ನು ಬೆಂಬಲಿಸುತ್ತದೆ. ಈ ಪ್ರಯತ್ನವು ತಳಮಟ್ಟದ ಸಮುದಾಯ-ಆಧಾರಿತ ಅಂತರಗಳನ್ನು ನಿವಾರಿಸುವಲ್ಲಿ ಗಮನಹರಿಸಲಿದೆ. ಆರಂಭದಲ್ಲಿ ಇಧು ಎರಡು ಜಿಐ ಆಧಾರಿತ ಕ್ಷೇತ್ರಗಳ ಬಗ್ಗೆ ಗಮನಹರಿಸಿದರೆ, ನಿಧಾನವಾಗಿ ಮುಂದಿನ ಎರಡು ವರ್ಷಗಳಲ್ಲಿ ಅಂಥದೇ 46 ಜಿಐ ಆಧಾರಿತ ಕ್ಷೇತ್ರಗಳತ್ತ ವಿಸ್ತರಿಸಲಿದೆ’ ಎಂದರು.


ಮುಂದಿನ ಮೂರು ವರ್ಷಗಳಲ್ಲಿ ವಿಕೆಎಫ್‌ ರೈತರಿಗೆ, ಸ್ವಸಹಾಯ ಗುಂಪುಗಳಿಗೆ, ಇತರ ಪಾಲುದಾರರಿಗೆ ಉತ್ಪನ್ನಗಳ ಗುಣಮಟ್ಟವನ್ನು ಉತ್ತಮಗೊಳಿಸುವಲ್ಲಿ, ಮಾರುಕಟ್ಟೆಯನ್ನು ಒದಗಿಸುವಲ್ಲಿ, ಜಿಐ ಪಟ್ಟಿಯಲ್ಲಿರುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆಯನ್ನು ದೊರಕಿಸುವಲ್ಲಿ ನೆರವಾಗುವ ಗುರಿಯನ್ನು ಹೊಂದಲಾಗಿದೆ. ಈ ಪ್ರಯತ್ನವನ್ನು ಮುಂದಿನ ಹಂತಕ್ಕೆ ಒಯ್ಯುವಲ್ಲಿ ವಿಕೆಎಫ್‌ ಸಾಮಾನ್ಯ ಸೌಲಭ್ಯ ಕೇಂದ್ರ [ಕಾಮನ್‌ ಫೆಸಿಲಿಟಿ ಸೆಂಟರ್‌-ಸಿಡಿಎಫ್‌] ಗಳನ್ನು ಸಣ್ಣ, ಮಧ್ಯಮ ಮತ್ತು ಬೃಹತ್‌ ಮಟ್ಟದ ಉದ್ಯಮಮಳಿಗೆ [ಮೈಕ್ರೋ ಸ್ಮಾಲ್‌ ಆ್ಯಂಡ್‌ ಮೀಡಿಯಂ ಎಂಟರ್‌ಪ್ರೈಸಸ್‌- ಎಂಎಸ್‌ಎಂಇ], ಸಮೂಹ ಅಭಿವೃದ್ಧಿ ಕಾರ್ಯಕ್ರಮ [ಕ್ಲಸ್ಟರ್‌ ಡೆವಲಪ್‌ಮೆಂಟ್‌ ಪ್ರೋಗ್ರಾಮ್‌] ಯೋಜನೆಗಳಲ್ಲಿ ಆರಂಭಿಸುವ ಉದ್ದೇಶವನ್ನು ಹೊಂದಿದ್ದು ಇದು ಜಿಐ ಟ್ಯಾಗ್‌ ಆದ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲಿವೆ. ಈ ಪ್ರಯತ್ನದಿಂದ ರೈತ ಸಮುದಾಯದ ಆದಾಯ ಅಧಿಕವಾಗುವ ಸಾಧ್ಯತೆಯೂ ಇದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ [ಯುಎನ್‌ಡಿಪಿ] ಮತ್ತು ಕರ್ನಾಟಕ ಸರ್ಕಾರಗಳೊಂದಿಗೆ ಸುಸ್ಥಿರ ಅಭಿವೃದ್ಧಿಯ ಗುರಿಗಳ ಸಮನ್ವಯ ಕೇಂದ್ರ [ದ ಸಸ್ಟೇನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್‌ ಕೋಆರ್ಡಿನೇಶನ್‌ ಸೆಂಟರ್‌-ಎಸ್‌ಡಿಜಿಸಿಸಿ] ವು ಕೂಡ ಇದಕ್ಕೆ ಸಹಿಹಾಕಿದೆ. ವಿಶನ್‌ ಕರ್ನಾಟಕ ಫೌಂಡೇಶನ್‌ [ವಿಕೆಫ್‌] ಸಂಸ್ಥೆಯು ಸಣ್ಣ, ಮಧ್ಯಮ ಮತ್ತು ಬೃಹತ್‌ ಮಟ್ಟದ ಉದ್ಯಮಮಳಿಗೆ [ಮೈಕ್ರೋ ಸ್ಮಾಲ್‌ ಆ್ಯಂಡ್‌ ಮೀಡಿಯಂ ಎಂಟರ್‌ಪ್ರೈಸಸ್‌- ಎಂಎಸ್‌ಎಂಇ] ಮಂತ್ರಾಲಯ, ಭಾರತ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳ ತಾಂತ್ರಿಕ ಪ್ರತಿನಿಧಿಯಾಗಿದೆ. ಸಾಂಪ್ರದಾಯಿಕ ಉದ್ಯಮಗಳ ಪುನರುಜ್ಜೀವನದ ನಿಧಿ ಯೋಜನೆ [ಸ್ಕೀಮ್‌ ಆಫ್‌ ಫಂಡ್‌ ಫಾರ್‌ ದ ರೀಜನರೇಶನ್‌ ಆಫ್‌ ಟ್ರೆಡೀಶನಲ್‌ ಇಂಡಸ್ಟ್ರೀಸ್‌ -ಎಸ್‌ಎಫ್‌ಯುಆರ್‌ಟಿಐ] ಯಲ್ಲಿ ವಿಕೆಎಫ್‌ ಅನೇಕ ಜೀವನಾಭ್ಯುದಯ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಈ ಆರಂಭಿಕ ಪ್ರಯತ್ನದ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತ, ‘ಈ ಸಹಭಾಗಿತ್ವವು ಸುಸ್ಥಿರ ಅಭಿವೃದ್ಧಿ ಮತ್ತು ಸಾಮುದಾಯಿಕ ಸಬಲೀಕರಣದ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಮಾಹೆಯಲ್ಲಿ ಶಿಕ್ಷಣ ಕ್ಷೇತ್ರವು ನಾವೀನ್ಯವನ್ನು ಅಳವಡಿಸುವುದನ್ನು ಮತ್ತು ಸಮಾಜಮುಖಿಯಾಗುವುದರ ಕಡೆಗೆ ಒತ್ತು ನೀಡುತ್ತೇವೆ. ಉಡುಪಿ ಮಟ್ಟುಗುಳ್ಳ ಮತ್ತು ಶಂಕರಪುರ ಉಡುಪಿ ಮಲ್ಲಿಗೆಗಳಂಥ ಜಿಐ-ಟ್ಯಾಗ್‌ ಆಗಿರುವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಇನ್‌ಕ್ಯುುಬೇಶನ್‌ ಪ್ರೋಗ್ರಾಮ್‌ ನ್ನು ಬೆಂಬಲಿಸುತ್ತೇವೆ. ಸ್ಥಳೀಯ ಪ್ರತಿಭೆಗಳನ್ನು ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವುದರ ಜೊತೆಗೆ, ಈ ಪ್ರದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ಕುರಿತು ಕೂಡ ಗಮನಹರಿಸುತ್ತೇವೆ. ನಮ್ಮ ವಿದ್ಯಾರ್ಥಿಗಳು ಮತ್ತು ಬೋಧಕರು ಈ ವಿಶಿಷ್ಟ ಅಧ್ಯಯನ ಅನುಭವದಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ ಮತ್ತು ಇದು ಶಿಕ್ಷಣವನ್ನು ಸಮಾಜಮುಖಿಯಾಗಿಸುವ ನಮ್ಮ ಧ್ಯೇಯಕ್ಕೆ ಅನುಗುಣವಾಗಿಯೇ ಇದೆ’ ಎಂದರು.

ಅಂತರಾಷ್ಟ್ರೀಯ ವ್ಯಾಪಾರ ಮತ್ತು ಭೌಗೋಳಿಕ ಸೂಚಿಗಳನ್ನು ಹೊಂದಿರುವ ಉತ್ಪನ್ನ [ಜಿಐ ಟ್ಯಾಗ್ಡ್‌ ಪ್ರೊಡಕ್ಟ್‌] ನ ಕರ್ನಾಟಕ ಸಂಪರ್ಕ ಸಂಸ್ಥೆ [ನೋಡಲ್‌ ಏಜೆನ್ಸಿ] ವಿಟಿಪಿಸಿಯ ಪ್ರತಿನಿಧಿ, ಬೌದ್ಧಿಕ ಸಂಪನ್ಮೂಲ ಕಾರ್ಯಕ್ರಮಗಳು [ಇಂಟೆಲೆಕ್ಚುವಲ್‌ ಪ್ರಾಪರ್ಟಿ ಇನಿಶಿಯೇಟಿವ್ಸ್‌]ನ ಅಧಿಕಾರಿ ಪ್ರಭಾವತಿ ರಾವ್‌ ಅವರು ಉಪಸ್ಥಿತರಿದ್ದರು.
ಅವರು ಈ ಮಹತ್ತ್ವದ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸುತ್ತ, ಭೌಗೋಳಿಕ ನೀತಿಸೂಚಿಗೆ ಸಂಬಂಧಿಸಿ ಈ ಹೆಜ್ಜೆಯು ಭಾರತದಲ್ಲಿ ಪ್ರಪ್ರಥಮವಾಗಿದೆ. ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದಡಿಯಲ್ಲಿ ರಾಜ್ಯಕ್ಕೆ ಪ್ರಸಿದ್ಧಿ ತಂದುಕೊಂಡಿರುವ ಪಾರಂಪರಿಕ ಉತ್ಪನ್ನಗಳಿಗೆ ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ವಿಟಿಪಿಸಿ ಮಾಡುತ್ತಿದೆ. ವಿವಿಧ ಕಲಾಕಾರರಿಗೆ, ಉತ್ಪಾದಕರಿಗೆ, ರೈತರಿಗೆ ಜಿಐ ಟ್ಯಾಗ್ಡ್‌ ಉತ್ಪನ್ನಗಳಿಗಳಿಗಾಗಿ 1999 ಜಿಐ ಕಾಯ್ದೆ ಯನ್ವಯ ದಾಖಲಾತಿ ಮಾಡಲು ಪ್ರೋತ್ಸಾಹ ನೀಡುತ್ತಿದೆ. ವಿಟಿಪಿಸಿಯು ಉಡುಪಿ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆಯ ಉತ್ಪಾದಕರನ್ನು ಜಿಐ-ಉತ್ಪನ್ನಗಳ ಅಧಿಕೃತ ಬಳಕೆದಾರರನ್ನಾಗಿ ನೋಂದಣಿ ಮಾಡಿಕೊಳ್ಳಲು ಹೆಜ್ಜೆ ಇರಿಸಲಿದೆ’ ಎಂದರು.

ಈ ಮಹತ್ತ್ವದ ಪ್ರಯತ್ನದಲ್ಲಿ ಭಾಗಿಯಾಗಲು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಅಭಿಮಾನ ಪಡುತ್ತಿದೆ. ಶಿಕ್ಷಣದ ಪ್ರಯೋಜನವನ್ನು ಸಮಾಜಕ್ಕೆ ವಿಸ್ತರಿಸುವ ಮಾಹೆಯ ಪ್ರಯತ್ನಕ್ಕೆ ಇದು ಪೂರಕವಾಗಿದೆ. ಜಿಐ-ಟ್ಯಾಗ್ಡ್‌ ಉತ್ಪನ್ನಗಳನ್ನು ಸಿದ್ಧಗೊಳಿಸುವ ರೈತ ಸಮುದಾಯಗಳೊಂದಿಗೆ ಸಕ್ರಿಯವಾದ ಸಂಬಂಧ ಹೊಂದಲು ಮಾಹೆ ಮುಂದೆ ಬಂದಿದೆ. ಇನ್‌ಕ್ಯುಬೇಶನ್‌ ಫೆಸಿಲಿಟಿಯ ಮೂಲಕ ಉಡುಪಿ ಮಟ್ಟುಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಬೆಳೆಯುವ ರೈತರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಅವಕಾಶ ದೊರಕಿರುವುದು ಮಾಹೆ ಮತ್ತು ಸ್ಥಳೀಯ ಸಮುದಾಯಗಳ ನಿಕಟ ಸಂಬಂಧದ ಪ್ರತೀಕವಾಗಿದೆ.

ಮಾಹೆಯ ಕುಲಸಚಿವ [ರಿಜಿಸ್ಟ್ರಾರ್‌] ಡಾ. ಪಿ. ಗಿರಿಧರ್‌ ಕಿಣಿ ಅವರು ಮಾತನಾಡಿ, ’ಸ್ಥಳೀಯ ಅಭಿವೃದ್ಧಿಗಾಗಿ ಮಾಹೆ ಯಾವತ್ತೂ ಆದ್ಯತೆ ನೀಡಲಿದೆ. ಇಂಥ ಬೆಳವಣಿಗೆಗಳು ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ಕ್ಷೇತ್ರಾಧ್ಯಯನದ ಅನುಭವವನ್ನು ನೀಡಲಿದೆ ಮತ್ತು ಸಾಮಾಜಿಕ ಪ್ರಗತಿಗೂ ಕೊಡುಗೆ ನೀಡಲಿದೆ’ ಎಂದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸಂದೀಪ್‌ ಶೆಣೈ ಮಾತನಾಡಿ, ‘ಜಿಐ ಜೀವನಾಭಿವೃದ್ಧಿ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದ ಪ್ರಮುಖ ಹೆಜ್ಜೆ ಇದಾಗಿದೆ. ಮಾಹೆಯ ವಾಣಿಜ್ಯ ವಿಭಾಗವು ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ದೊರಕಿಸಿಕೊಡುವಲ್ಲಿ ಜಿಐ ಕ್ಲಸ್ಟರ್‌ಗೆ ಸಹಾಯ ಮಾಡಲಿದೆ. ಈ ಮೂಲಕ ರೈತ ಸಮುದಾಯದ ಜೀವನೋತ್ಕರ್ಷಕ್ಕೆ ನೆರವಾಗಲಿದೆ’ ಎಂದರು.

spot_img

More articles

LEAVE A REPLY

Please enter your comment!
Please enter your name here