ಉಡುಪಿ: ಭಾರತದ ಕ್ರಿಕೆಟ್ ದಂತಕಥೆ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ MS ಧೋನಿ ಅವರು IPL ನಿಂದ ನಿವೃತ್ತಿಯಾಗಿದ್ದಾರೆ. 2027ರ ಆವೃತ್ತಿಯಲ್ಲಿ ಅವರು ಆಟಗಾರನಾಗಿ ಕಣಕ್ಕಿಳಿಯುವ ಬದಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು India Today ವರದಿ ಮಾಡಿದೆ.
ಸುಮಾರು ಎರಡು ದಶಕಗಳ ಕಾಲ ಐಪಿಎಲ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಧೋನಿ ಅವರ ಆಟಗಾರನಾಗಿ ವೃತ್ತಿಜೀವನಕ್ಕೆ ಇದರಿಂದ ತೆರೆ ಬಿದ್ದಿದೆ. ಮುಂದಿನ ಆವೃತ್ತಿಯಲ್ಲಿ ಅವರು ತಂಡದೊಂದಿಗೆ ಆಟಗಾರನಾಗಿ ಅಲ್ಲದೆ ಮಾರ್ಗದರ್ಶಕರಾಗಿ ಇರಲಿದ್ದಾರೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ತಂಡದ ಯಶಸ್ಸಿನಲ್ಲಿ ಅವರ ನಾಯಕತ್ವ, ಅನುಭವ ಹಾಗೂ ತಂತ್ರಗಾರಿಕೆ ಮಹತ್ವದ ಪಾತ್ರ ವಹಿಸಿವೆ.
2026ರ ಐಪಿಎಲ್ ನಲ್ಲಿ ಗಾಯದ ಸಮಸ್ಯೆಯಿಂದಾಗಿ ಧೋನಿ ಒಂದೂ ಪಂದ್ಯ ಆಡಿರಲಿಲ್ಲ. ಸ್ನಾಯುವಿನ ಗಾಯದ ಸಮಸ್ಯೆಯಿಂದಾಗಿ ಅವರು ಇಡೀ ಆವೃತ್ತಿಯಿಂದ ಹೊರಗುಳಿದಿದ್ದರು. ಇದರಿಂದ ಅವರ ಐಪಿಎಲ್ ಭವಿಷ್ಯದ ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು.
ಅಕ್ಟೋಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಧೋನಿ, ಮತ್ತೊಂದು ಐಪಿಎಲ್ ಆಡುವ ಸಾಮರ್ಥ್ಯ ತಮ್ಮಲ್ಲಿದೆಯೇ ಎಂಬುದನ್ನು ವೈದ್ಯಕೀಯ ಪರೀಕ್ಷೆಗಳ ಬಳಿಕ ನಿರ್ಧರಿಸುವುದಾಗಿ ಹೇಳಿದ್ದರು. ಡಿಸೆಂಬರ್ ಗೂ ಮುನ್ನ ತಮ್ಮ ದೈಹಿಕ ಸಾಮರ್ಥ್ಯವನ್ನು ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದರು.
ಇದೀಗ 2027ರ ಆವೃತ್ತಿಯಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳದ ಧೋನಿ, ಸಿಎಸ್ಕೆ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುವುದು ಹಾಗೂ ತಮ್ಮ ಅನುಭವವನ್ನು ಹಂಚಿಕೊಳ್ಳುವುದು ಅವರ ಹೊಸ ಜವಾಬ್ದಾರಿಯ ಪ್ರಮುಖ ಭಾಗವಾಗಿರಲಿದೆ.
ಆಟಗಾರನಾಗಿ ಐಪಿಎಲ್ಗೆ ವಿದಾಯ ಹೇಳಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದೊಂದಿಗಿನ ಧೋನಿ ಅವರ ನಂಟು ಮುಂದುವರಿಯಲಿದೆ.

