Sunday, November 15, 2026

ಕಲ್ಯಾಣಪುರ: ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಂರಕ್ಷಿತ ವೀರ ಮಾಸ್ತಿ ಕಲ್ಲಿನ ಲೋಕಾರ್ಪಣೆ

Must read

ಉಡುಪಿ: ಆದಿಮ ಕಲಾ ಟ್ರಸ್ಟ್ ಉಡುಪಿ ,ಪಡುನಾಡು ಕೂಟ ಬೆಂಗಳೂರು, ಗಜನಿ ಫೌಂಡೇಶನ್ ಮುಲ್ಕಿ,ಹಾಗೂ ರಾಣಿ ಚಿಕ್ಕಾಯಿ ತಾಯಿ ಚಾರಿಟೇಬಲ್ ಟ್ರಸ್ಟ್ ಗುಳ್ಳಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಕಲ್ಯಾಣಪುರ ಕೆಂಚಮ್ಮದೇವಿ ದೇವಸ್ಥಾನದ ಆವರಣದಲ್ಲಿ ಸಂರಕ್ಷಿತ ವೀರ ಮಾಸ್ತಿ ಕಲ್ಲಿನ ಲೋಕಾರ್ಪಣೆ ಸಮಾರಂಭ ಇಂದು ನಡೆಯಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ , ಸಂರಕ್ಷಿತ ವೀರ ಮಾಸ್ತಿ ಕಲ್ಲಿನ ಲೋಕಾರ್ಪಣೆ ಮಾಡಿದರು. ಬಳಿಕ ದೇವಸ್ಥಾನದ ವಠಾರದಲ್ಲಿ ಸಭಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಆದಿಮ ಕಲಾ ಟ್ರಸ್ಟ್ ಉಡುಪಿ ಇದರ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ, ಕಲ್ಯಾಣಪುರದ ಕೆಂಚಮ್ಮ ದೇವಿ ದೇವಸ್ಥಾನ ಕೆಳದಿ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಎಂಬುದು ತಿಳಿದುಬರುತ್ತದೆ. ಹಾಗಾಗಿ ಈ ಮಾಸ್ತಿ ಕಲ್ಲು ಕೆಳದಿ ಕಾಲದ್ದೇ ಆಗಿರಬೇಕು.ಅದನ್ನು ಹೊರತೆಗೆದು ಅಧ್ಯಯನ ಮಾಡಿದೆವು. ಸಾಮಾನ್ಯವಾಗಿ ವೀರಗಲ್ಲಿನಲ್ಲಿ ಯುದ್ದದ ಚಿತ್ರಣ ಇರುತ್ತದೆ.ಇದರಲ್ಲಿ ಯುದ್ದದ ಚಿತ್ರಣ ಇಲ್ಲ.ವಾದ್ಯದವರು ಇದ್ದಾರೆ.ಇದು ವಿಶೇಷ ಭಂಗಿ.ವೇಳೆ ವಾಳಿ ಪದ್ಧತಿಯಲ್ಲಿ ಇದು ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿ 9 ರಿಂದ 13 ನೇ ಶತಮಾನದವರೆಗೆ ಈ ಪದ್ದತಿ ಅಸ್ತಿತ್ವದಲ್ಲಿತ್ತು. ವೇಳೆ ವಾಳಿ ಪದ್ದತಿಯ ಕಾಲದಲ್ಲಿ ರಾಜ ಸತ್ತಾಗ ಅವನ ಪತ್ನಿಯರು ಪ್ರಾಣ ತ್ಯಾಗ ಮಾಡಿದಾಗಿನ ಸನ್ನಿವೇಶ ಇದರಲ್ಲಿ ಕಾಣಸಿಗುತ್ತದೆ. ಆ ಘಟನೆಯ ಪ್ರತೀಕವಾಗಿ ಈ ಮಾಸ್ತಿಕಲ್ಲು ರಚಿಸಿ ಇಲ್ಲಿ ಇಡಲಾಗಿದೆ.ಪಕ್ಕದಲ್ಲೇ ಕೆಂಚಮ್ಮ ದೇವಿ ದೇವಸ್ಥಾನ ಇದೆ. ದೇವಸ್ಥಾನದಲ್ಲಿ ಒಂದು ಸ್ತ್ರೀ ಶಿಲ್ಪ ಮತ್ತು ಪಕ್ಕದಲ್ಲಿ ಮತ್ತಿಬ್ಬರು ಸ್ತ್ರೀಯರು ಇದ್ದಾರೆ.ಇಲ್ಲಿ ಇವತ್ತಿಗೂ ಜನರು 3 ಜನ ದೇವಿಯರನ್ನು ಆರಾಧಿಸುತ್ತಾರೆ.ಈ ಅಪರೂಪದ ಮಾಸ್ತಿ ಕಲ್ಲನ್ನು ಮುಂದಿನ ಜನಾಂಗಕ್ಕೆ ಸಂರಕ್ಷಣೆ ಮಾಡಿ ಇಡಬೇಕಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಈ ಕಾರ್ಯಕ್ರಮದ ಮೂಲಕ ದೇವಸ್ಥಾನ ಮತ್ತು ಮಾಸ್ತಿ ಕಲ್ಲಿನ ಪುನರ್ ಪರಿಚಯ ಆಗಿದೆ.ಕರಾವಳಿ ಪರಶುರಾಮನ ಸೃಷ್ಟಿ. ನಾಗಾರಾಧನೆಗೆ ಇಲ್ಲಿ ಮಹತ್ವ ಇದೆ. ಜೊತೆಗೆ ಕರಾವಳಿ ಮಠ ಮಂದಿರಗಳ ಕೇಂದ್ರ. ಉಡುಪಿಯ ಜನ ಈ ಮಣ್ಣಿನ ಗುಣದಿಂದ ಎಲ್ಲೇ ಹೋದರೂ ಯಶಸ್ವಿಯಾಗಿದ್ದಾರೆ. ಬಹಳಷ್ಟು ಪ್ರಚೀನ ವಿಷಯ ಇಲ್ಲಿ ಅಡಗಿದೆ. ಇವತ್ತು ಸಂರಕ್ಷಿತ ಮಾಸ್ತಿ ಕಲ್ಲನ್ನು ಲೋಕಾರ್ಪಣೆ ಮಾಡಿದ್ದೀರಿ. ಖಂಡಿತ ಯುವ ಪೀಳಿಗೆಗೆ ಇದರ ಬಗ್ಗೆ ಇನ್ನಷ್ಡು ತಿಳಿಸಿಕೊಡುವ ಕೆಲಸ ಆಗಬೇಕು.ಕೆಂಚಮ್ಮ ದೇವಸ್ಥಾನ ಮತ್ತು ಈ ಅಪರೂಪದ ಮಾಸ್ತಿಕಲ್ಲಿಗೆ ಸಂಬಂಧಿಸಿ ಗ್ರಂಥ ರಚನೆ ಮಾಡಿ ಮುಂದಿನ ತಲೆಮಾರಿಗೆ ತಿಳಿಸಿ ಕೊಡುವ ಕೆಲಸ ಆಗಬೇಕು ಎಂದರು.
ಗಜನಿ ಫೌಂಡೇಶನ್ ಮುಲ್ಕಿ ಹಾಗೂ ಪಡುನಾಡು ಕೂಟದ ಅಧ್ಯಕ್ಷ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಅಧ್ಯಕ್ಷತೆ ವಹಿಸಿದ್ದರು.
ಬೆಂಗಳೂರು ಜಿಯೋಸಿಸ್ ಟೆಕ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕ ರಾಜಶೇಖರ ಕೋಟ್ಯಾನ್, ಹಂಪಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕ ಡಾ. ಆರ್. ಶೇಜೇಶ್ವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಉಪನ್ಯಾಸಕಿ ಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here