ಉಡುಪಿ: ತುಳುನಾಡಿನ ಸಂಸ್ಕೃತಿ, ಪರಂಪರೆ, ದೈವಾರಾಧನೆ ಹಾಗೂ ಕೃಷಿ ಪ್ರಧಾನ ಕುಟುಂಬದ ಬದುಕಿನ ಕಥಾಹಂದರ ಹೊಂದಿರುವ ‘ಬೆಲ್ಲದಗಟ್ಟಿ’ ತುಳು ಚಲನಚಿತ್ರ ನವೆಂಬರ್ 20ರಂದು ತುಳುನಾಡಿನಾದ್ಯಂತ ತೆರೆಕಾಣಲಿದೆ.
ಉದಯೋನ್ಮುಖ ನಟ ಹಾಗೂ ನಿರ್ದೇಶಕ ರಾಜಾ ಕಟಪಾಡಿ ಅವರ ಸಾರಥ್ಯದಲ್ಲಿ ಕಟೀಲ್ ಪ್ರಸಾದ್ ಪ್ರೊಡಕ್ಷನ್ಸ್ ಕಟಪಾಡಿ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದ ನಿರ್ಮಾಪಕರಾಗಿ ರಾಮಕೃಷ್ಣ ಸುಜೀರ್ ಬಾರ್ದಿಲಾ ಬಂಡವಾಳ ಹೂಡಿದ್ದಾರೆ. ಜಗತ್ ರಾಜಪಾಲ್ ಬಿಕರ್ಣಕಟ್ಟೆ ಅವರ ಪ್ರೇರಣೆಯಿಂದ ಚಿತ್ರ ನಿರ್ಮಾಣಗೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ದೇಶಕ ರಾಜಾ ಕಟಪಾಡಿ ಅವರು, ಕೃಷಿ ಪ್ರಧಾನ ಕುಟುಂಬವೊಂದರ ಸಾಂಸಾರಿಕ ಜೀವನದ ಹಿನ್ನೆಲೆಯಲ್ಲಿ ಚಿತ್ರ ಮೂಡಿಬಂದಿದೆ. ಹಿರಿಯರ ಆಚರಣೆಗಳು, ಕೃಷಿ ಚಟುವಟಿಕೆಗಳು, ದೈವಾರಾಧನೆ, ಧಾರ್ಮಿಕ ಹಾಗೂ ಜಾನಪದ ಸಂಪ್ರದಾಯಗಳು, ಕಟ್ಟುಪಾಡುಗಳು ಮತ್ತು ಶ್ರಮದಾಯಕ ಜೀವನಪದ್ಧತಿಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ತಪ್ಪು ಕಲ್ಪನೆಯಿಂದ ದೈವದ ಮುಂದೆ ಮಾಡುವ ಪ್ರಮಾಣವೊಂದು ಕುಟುಂಬದಲ್ಲಿ ಸೃಷ್ಟಿಸುವ ಘಟನೆಗಳು, ಅದರ ಪರಿಣಾಮಗಳು ಹಾಗೂ ತಪ್ಪಿನ ಅರಿವಿನೊಂದಿಗೆ ತಪ್ಪು-ಸರಿಗಳ ನಡುವೆ ನಡೆಯುವ ಸಂಘರ್ಷ ಚಿತ್ರದ ಪ್ರಮುಖ ಕಥಾವಸ್ತುವಾಗಿದೆ.
ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡಿರುವ ಚಿತ್ರ ಅಲ್ಲಿನ ತುಳು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಉಡುಪಿ, ಮಣಿಪಾಲ ಹಾಗೂ ಮಂಗಳೂರಿನಲ್ಲಿಯೂ ಪ್ರೀಮಿಯರ್ ಪ್ರದರ್ಶನಗಳು ನಡೆದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತಮ್ಮದೇ ನಾಟಕ ತಂಡಗಳ ಕಲಾವಿದರಿಗೆ ಚಲನಚಿತ್ರ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಚಿತ್ರ ನಿರ್ಮಿಸಲಾಗಿದೆ ಎಂದರು.
ಪ್ರಜ್ವಲ್ ಸುವರ್ಣ ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸಿದ್ದು, ಸಂದೇಶ್ ಬಾಬಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಮನ್ರಿ ರೈ ಪುತ್ತೂರು ಹಾಗೂ ಕೆ.ಪಿ. ಮಿಲನ್ ಹಿನ್ನೆಲೆ ಗಾಯನ ನೀಡಿದ್ದಾರೆ. ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಯು/ಎ ಪ್ರಮಾಣಪತ್ರ ದೊರೆತಿದೆ.
ಚಿತ್ರದ ಉದ್ಘಾಟನಾ ಪ್ರದರ್ಶನ ನವೆಂಬರ್ 20ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಟೈಮ್ಸ್ ಸ್ಕ್ವೇರ್ ಮಾಲ್‌ನ ಭಾರತ್ ಸಿನಿಮಾ ಥಿಯೇಟರ್‌ನಲ್ಲಿ ನಡೆಯಲಿದೆ. ಕೇಂಜ ಗರಡಿಯ ಗಡಿ ಪ್ರಧಾನರಾದ ಉಮೇಶ್ ಕೋಟ್ಯಾನ್ ಯಾನೆ ಬಗ್ಗ ಪೂಜಾರಿ, ಕಟಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ರಾವ್ ಹಾಗೂ ಬ್ಲೂ ಸೈ ಮೈಕ್ರೋ ಸರ್ವೀಸಸ್ ಫೌಂಡೇಶನ್‌ನ ಎಂ.ಡಿ. ಕೃಷ್ಣ ಪೂಜಾರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಮನೋಹರ್ ಶೆಟ್ಟಿ ನಂದಳಿಕೆ, ಸುಜಾತಾ ಶಕ್ತಿನಗರ, ವಿಜಿತ್ ಕೋಟ್ಯಾನ್, ಸುನಿಲ್ ನೆಲ್ಲಿಗುಡ್ಡೆ, ಕಿಶ್ಮಿತಾ ನವೀಶ್, ನಿತೇಶ್ ರಾಜ್, ಅಪೇಕ್ಷಾ ಶೆಟ್ಟಿ, ಸುಜಾತಾ ಶೆಟ್ಟಿ ಪೆರಿಂಜೆ, ಸೊಹಾನಾ ಶಂಕರ್, ಜಯಕರ್ ಕುಂದರ್, ದೀಕ್ಷಾ ಬ್ರಹ್ಮಾವರ, ಗುಣಪ್ರಸಾದ್, ಬಾಲಕಲಾವಿದ ಮಾಸ್ಟರ್ ಕರಣ್, ಚೈತಾಲಿ ಶೇಟ್, ದೇಶ್ಚಾ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ ಎಂದು ಹೇಳಿದರು.
ನ. 20ರಂದು ತುಳುನಾಡಿನಾದ್ಯಂತ ‘ಬೆಲ್ಲದಗಟ್ಟಿ’ ತುಳು ಸಿನಿಮಾ ತೆರೆಗೆ

