ಉಡುಪಿ: ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರ ಸಾಕು ಮಗಳು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಕಾಪು ಪೊಲೀಸರು ಆಕೆಯ ಗೆಳೆಯ ಸೇರಿದಂತೆ ನಾಲ್ವರನ್ನು ಕಾಸರಗೋಡು ಜಿಲ್ಲೆಯ ಕುಂಬ್ಳೆ ಬಳಿ ಬಂಧಿಸಿದ್ದಾರೆ.
ಲೀಲಾಧರ್ ಶೆಟ್ಟಿ ಅವರ ಸಾಕು ಮಗಳ ಸ್ನೇಹಿತ ಶಿರ್ವ ನಿವಾಸಿ ಗೀರಿಶ್ (20) ಮತ್ತು ನಾಪತ್ತೆಯಾಗಲು ಸಹಕರಿಸಿದವರಾದ ಶಿರ್ವ ನಿವಾಸಿ ರೂಪೇಶ್ (22), ಜಯಂತ್ (23) ಹಾಗೂ ಮಜೂರು ನಿವಾಸಿ ಮೊಹ್ಮದ್ ಅಝೀಜ್ ಬಂಧಿತ ಆರೋಪಿಗಳು. ಸಾಕು ಮಗಳು ಹಾಗೂ ನಾಲ್ವರು ಆರೋಪಿಗಳನ್ನು ಪೊಲೀಸರು ಕಾಸರಗೋಡಿನ ಕುಂಬ್ಳೆ ಬಳಿ ಬಂಧಿಸಿದ್ದಾರೆ.
ಡಿಸೆಂಬರ್ 11 ರಂದು ಲೀಲಾಧರ ಶೆಟ್ಟಿ ಅವರ ಅಪ್ರಾಪ್ತ ವಯಸ್ಸಿನ ಸಾಕು ಮಗಳು ಮನೆ ಬಿಟ್ಟು ಹೋಗಿದ್ದಳು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಕು ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂಧರಾ ಶೆಟ್ಟಿ ಮರ್ಯಾದೆಗೆ ಅಂಜಿ ನೇಣಿಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆರೋಪಿ ಗಿರೀಶ್ ವಿರುದ್ದ ಪೋಕ್ಸೊ, ಅತ್ಯಾಚಾರ ಹಾಗೂ ಕಿಡ್ನ್ಯಾಪ್ ಪ್ರಕರಣಗಳನ್ನು ಹಾಗೂ ಇತರ ಮೂವರ ವಿರುದ್ಧ ಪೋಕ್ಸೊ ಪ್ರಕರಣವನ್ನು ದಾಖಲಿಸಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ