ಉಡುಪಿ: ಹೋಂ ಸ್ಟೇಗೆ ನಿರಾಕ್ಷೇಪಣಾ ಪತ್ರ (ಎನ್ಒಸಿ) ನೀಡಲು ₹5 ಸಾವಿರ ಲಂಚ ಸ್ವೀಕರಿಸಿದ ಆರೋಪದ ಮೇಲೆ ಕುಂದಾಪುರ ತಾಲೂಕು ಕಚೇರಿಯ ಗ್ರಾಮ ಆಡಳಿತಾಧಿಕಾರಿ (ವಿಎ) ಹರೀಶ್ ಎಸ್. ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಕಚೇರಿಯಲ್ಲೇ ಬಂಧಿಸಿದ್ದಾರೆ.
ಕಂಡ್ಲೂರಿನಲ್ಲಿ ನಿರ್ಮಾಣವಾಗಲಿರುವ ಹೋಂ ಸ್ಟೇಗೆ ಎನ್ಒಸಿ ನೀಡಲು ಹರೀಶ್ ಅವರು ₹5 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಹಣವನ್ನು ಗೂಗಲ್ ಪೇ ಮೂಲಕ ಪಾವತಿಸುವಂತೆ ಸೂಚಿಸಿದ್ದರು. ಈ ಕುರಿತು ದೂರುದಾರ ಸುರೇಶ್ ನಾಯ್ಕ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಹಣ ವರ್ಗಾವಣೆಗೆ ಸೂಚಿಸಿದ ಮೊಬೈಲ್ ಕರೆಯ ಧ್ವನಿಮುದ್ರಿಕೆ ಸೇರಿದಂತೆ ಲಭ್ಯ ದಾಖಲೆಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಮಂಗಳೂರು ವಿಭಾಗದ ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ಡಿವೈಎಸ್ಪಿ ಹಾಲಮೂರ್ತಿ ರಾವ್ ಅವರ ನಿರ್ದೇಶನದಂತೆ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಮತ್ತು ರಾಜೇಂದ್ರ ನಾಯ್ಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು. ಸಿಬ್ಬಂದಿಯಾದ ರಾಘವೇಂದ್ರ, ನಾಗರಾಜ್, ಅರುಣ್, ಅಬ್ದುಲ್ ಜಲಲ್, ರವೀಂದ್ರ, ಆದರ್ಶ, ರಾಘವೇಂದ್ರ ಹೊಸ್ಕೋಟೆ ಹಾಗೂ ಸೂರಜ್ ಪಾಲ್ಗೊಂಡಿದ್ದರು.
ಕುಂದಾಪುರ: ಹೋಂ ಸ್ಟೇ ಎನ್ಒಸಿಗೆ ₹5 ಸಾವಿರ ಲಂಚ: ತಾಲೂಕು ಕಚೇರಿ ವಿಎ ಲೋಕಾಯುಕ್ತ ಬಲೆಗೆ

