ಉಡುಪಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಕೇಕ್ ಮಿಕ್ಸ್ ಕಾರ್ಯಕ್ಕೆ ಮಣಿಪಾಲದಲ್ಲಿ ಚಾಲನೆ ನೀಡಲಾಯಿತು.
ಮಣಿಪಾಲದ ವೆಲ್ಕಮ್‌ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೊಟೇಲ್ ಅಡ್ಮಿಸ್ಟ್ರೇಷನ್ (ವಾಗ್ಷಾ) ವತಿಯಿಂದ ಆಯೋಜಿಸಲಾಗಿದ್ದ ಕೇಕ್ ಮಿಕ್ಸ್ ಕಾರ್ಯಕ್ಕೆ ಮಾಹೆ ಟ್ರಸ್ಟಿ ವಸಂತಿ ಪೈ ಚಾಲನೆ ನೀಡಿದರು.
ಬಳಿಕ ಗಣ್ಯರು ಬಾಣಸಿಗ ಟೋಪಿಗಳು ಮತ್ತು ಅಪ್ರಾನ್‌ಗಳನ್ನು ಧರಿಸಿ ಒಣದ್ರಾಕ್ಷಿ, ಸಕ್ಕರೆ ಪಾಕದಲ್ಲಿ ಹಾಕಿದ ಹಣ್ಣಿನ ಸಿಪ್ಪೆಗಳು, ಖರ್ಜೂರ, ಚೆರ್ರಿಗಳು ಮತ್ತು ಪರಿಮಳಯುಕ್ತ ಮಲಾಸೆಗಳಂತಹ ಪದಾರ್ಥಗಳನ್ನು ವಿವಿಧ ಬಗೆಯ ಮದ್ಯದೊಂದಿಗೆ ಮಿಶ್ರಣ ಮಾಡಿದರು. ಸುಮಾರು 160 ಕೆ.ಜಿ. ನೆಟ್ಸ್ ಹಾಗೂ ಡ್ರೈಪ್ರುಟ್ಸ್ ಗಳನ್ನು ಕಲಸಿ ನೆನಸಿ ಇಡಲಾಯಿತು.
ಇವುಗಳನ್ನು ಕ್ರಿಸ್ಮಸ್ ಅವಧಿಯಲ್ಲಿ ಸುಮಾರು 1000ಕೆ.ಜಿ. ಯಷ್ಟು ಕ್ರಿಸ್ಮಸ್ ಪ್ಲಮ್ ಕೇಕ್ ತಯಾರಿಸಲು ಬಳಸಲಾಗು ತ್ತದೆ. ಈ ಕೆಕ್‌ನ್ನು ಮಾಹೆ ಅಧಿಕಾರಿಗಳು ಮತ್ತು ಇತರ ಗಣ್ಯರಿಗೆ ವಿತರಿಸಲಾಗುತ್ತದೆ. ಅಲ್ಲದೆ ವಾಗ್ಷಾ ಕ್ಯಾಂಪಸ್ ನಲ್ಲಿರುವ ವಿದ್ಯಾರ್ಥಿಗಳು ನಡೆಸುವ ಕೆಫೆಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವಾಗ್ಷಾ ಪ್ರಾಂಶುಪಾಲ ಚೆಫ್ ಕೆ. ತಿರು ಮಾಹಿತಿ ನೀಡಿದರು.
ಲಕ್ಷಾಂತರ ರೂ.ಮೌಲ್ಯದ ಗೋಡಂಬಿ ಬೀಜ, ಒಣದ್ರಾಕ್ಷೆ, 3 ಬಗೆಯ ಟೂಟಿ-ಫ್ರೂಟಿ, ಚೆರ್ರಿ, ಬಾದಾಮ್, ಅಲ್ಮೋಡ ಹಾಗೂ ಇತರ ಡ್ರೈ ಫ್ರುಟ್ಸ್‌ಗಳನ್ನು ರಮ್, ಬ್ರಾಂಡಿ, ಬಿಳಿ ಮತ್ತು ಕೆಂಪು ವೈನ್, ದ್ರಾಕ್ಷಾರಸ, ಕಿತ್ತಳೆ ರಸ ಹಾಗೂ ಜೇನುತುಪ್ಪದೊಂದಿಗೆ ಬೆರೆಸಿ ಅದನ್ನು ಗಾಳಿಯಾಡದ ಪಾತ್ರೆಯಲ್ಲಿ ಸುಮಾರು ಒಂದು ತಿಂಗಳ ಕಾಲ ಮುಚ್ಚಿಟ್ಟು, ನಂತರ ಅದರಿಂದ ವೈವಿಧ್ಯಮಯ ಕೇಕ್ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಇಂದಿರಾ ಬಲ್ಲಾಳ್, ಕುಲಪತಿ ಲೆ.ಜ. ಡಾ.ಎಂ.ಡಿ.ವೆಂಕಟೇಶ್, ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್, ಎಂಐಟಿ ನಿರ್ದೇಶಕ ಡಾ.ಅನಿಲ್ ರಾಣಾ, ಕೆಎಂಸಿ ಡೀನ್ ಡಾ.ಪದ್ಮರಾಜ್ ಹೆಗ್ಡೆ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಡಾ.ನಾರಾಯಣ ಸಭಾ ಹಿತ್, ಡಾ.ಗಿರಿಧರ್ ಕಿಣಿ ಮೊದಲಾದವರು ಉಪಸ್ಥಿತರಿದ್ದರು.