ಉಡುಪಿ: ಉಡುಪಿ ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಈಸೀ ಲೈಫ್ ಎಂಟರ್‌ಪ್ರೈಸಸ್ ಹಾಗೂ ಎಸ್.ಆರ್.ಕೆ. ಲ್ಯಾಡರ್ಸ್ ಪುತ್ತೂರು ಇವರ ಸಹಯೋಗದಲ್ಲಿ ಜಿಲ್ಲಾ ರೈತ ಸಮಾವೇಶ -2025 ಅನ್ನು ಇದೇ ಫೆ.8ರಂದು ಉಡುಪಿ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಗಂಟೆಗೆ ಮಂಗಳೂರು ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಎಸ್. ನಾಗರಾಜ ಕೆದ್ಲಾಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ವೈಜ್ಞಾನಿಕ ಅಡಿಕೆ ಬೇಸಾಯ ಬಗ್ಗೆ ವಲಯ ತೋಟಗಾರಿಕಾ ಮತ್ತು ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಧನಂಜಯ, ಆರೋಗ್ಯ ನೆಮ್ಮದಿಗಾಗಿ ಕೃಷಿ ಬಗ್ಗೆ ಉಡುಪಿ ಪೋಲಿಸ್ ಉಪಾಧೀಕ್ಷಕ ಪ್ರಭು ಡಿ.ಟಿ., ಲಾಭದಾಯಕ ಕೃಷಿಗೆ ವಿವಿಧ ತಂತ್ರಜ್ಞಾನದ ಬಗ್ಗೆ ಬ್ರಹ್ಮಾವರ ಕೃಷಿ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಲಕ್ಷ್ಮಣ್, ಹೈನುಗಾರಿಕೆಯಲ್ಲಿ ಕೃತಕ ಗರ್ಭಧಾರಣೆಯ ಸವಾಲುಗಳ ಬಗ್ಗೆ ಮಣಿಪಾಲದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ ಶೆಟ್ಟಿ, ಭತ್ತದ ಇಳುವರಿ ಹೆಚ್ಚಿಸುವ ವಿಧಾನಗಳ ಬಗ್ಗೆ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರದ ಡಾ.ಸುಧೀರ್ ಕಾಮತ್, ಆಹಾರ ಪದ್ಧತಿ ಮತ್ತು ಮಧುಮೇಹ ಬಗ್ಗೆ ಡಾ. ಶ್ರುತಿ ಬಲ್ಲಾಳ್ ಅಂಬಲಪಾಡಿ ಉಪನ್ಯಾಸ ನೀಡಲಿದ್ದಾರೆ ಎಂದರು.
ಕೃಷಿ ಇಲಾಖೆಯಿಂದ ಸಿಗುವ ಸರಕಾರಿ ಸೌಲಭ್ಯಗಳ ಬಗ್ಗೆ ಉಡುಪಿಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ, ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಉಡುಪಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ ಮತ್ತು ವಿದ್ಯುತ್ ಗ್ರಾಹಕರಿಗೆ ಅಗತ್ಯ ಮಾಹಿತಿಗಳನ್ನು ಉಡುಪಿ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ದಿನೇಶ್ ಉಪಾಧ್ಯ ನೀಡಲಿದ್ದಾರೆ. ಕೃಷಿ ಮಾಹಿತಿ-ಮಾರ್ಗದರ್ಶನಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಧುನಿಕ ಕೃಷಿ ಪರಿಕರಗಳು, ಹೊಸ ಆವಿಷ್ಕೃತ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು, ವಿವಿಧ ಬೆಳೆಗಳ ಸುಧಾರಿತ ತಂತ್ರಜ್ಞಾನದಿಂದ ಬೆಳೆಸಿದ ಗಿಡಗಳು, ಬೀಜ, ಕೃಷಿ ಸಂಬಂಧಿ ಪುಸ್ತಕ ಮಳಿಗೆಗಳು ಇರುತ್ತವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಕುದಿ, ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು, ಉಪಾಧ್ಯಕ್ಷ ದಿನೇಶ್ ಶೆಟ್ಟಿ ಹೆರ್ಗಾ, ಶ್ರೀನಿವಾಸ್ ಆಚಾರ್ಯ ಬೈಲೂರು ಉಪಸ್ಥಿತರಿದ್ದರು.