ಉಡುಪಿ: ರಾಜ್ಯದ ವಿವಿಧೆಡೆ ನಡೆಯುತ್ತಿರುವ ಗೋವುಗಳ ಮೇಲಿನ ಕ್ರೌರ್ಯ, ದೌರ್ಜನ್ಯ ಖಂಡಿಸಿ ಎಲ್ಲರೂ ಜ.25ರಂದು ಒಂದು ದಿನದ ಉಪವಾಸ ವ್ರತ ಹಾಗೂ ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
ಗೋವುಗಳ ಮೇಲಿನ ದೌರ್ಜನ್ಯ, ಹಿಂಸೆ, ಗೋವಧೆ, ದುರಾಕ್ರಮಣಗಳು, ಗೋವಿನ ಆರ್ತನಾದಗಳು ಯಾವತ್ತೂ ಶ್ರೇಯಸ್ಸು ಉಂಟು ಮಾಡುವುದಿಲ್ಲ. ಬದಲಾಗಿ ಅದು ನೆಲದ ದುರ್ಭಿಕ್ಷೆ, ಅಶಾಂತಿ, ಕ್ಷಾಮಗಳಿಗೆ ಕಾರಣವಾಗುತ್ತವೆ. ಈ ಬೆಳವಣಿಗೆಗಳಿಂದ ಅಕ್ಷರಶಃ ಆಘಾತಗೊಂಡಿರುವ ಹಿಂದೂ ಸಮಾಜವು ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಿದೆ ಎಂದು ಹೇಳಿದ್ದಾರೆ.
ಗೋ ಹತ್ಯೆ, ಗೋವುಗಳ ಮೇಲಿನ ಪೈಶಾಚಿಕ ಕೃತ್ಯಗಳು ಅಂತ್ಯವಾಗಲೇಬೇಕು. ಈ ಉದ್ದೇಶಕ್ಕಾಗಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಲಾಗುತ್ತಿದೆ. ಯಾವುದೇ ಜಾತಿ, ಮತ ಬೇಧವಿಲ್ಲದೇ ಪುರುಷರು, ಮಹಿಳೆಯರು, ಯುವಕ, ಯುವತಿಯರು, ಸನಾತನ ಧರ್ಮಶ್ರದ್ಧೆ, ಗೋವುಗಳ ಮೇಲೆ ಪ್ರೀತಿ, ಭಕ್ತಿ, ಗೋವಿನ ಹಾಲು ಕುಡಿದ ಋಣಕ್ಕಾಗಿ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗಿಯಾಗಲು ಶ್ರೀಗಳು ಕರೆ ನೀಡಿದ್ದಾರೆ.
ಅಭಿಯಾನದ ಕೊನೆಯ ದಿನ (ಜ.29) ಆಯಾ ಊರಿನ ಮಠ, ಮಂದಿರ, ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಅಥವಾ ಪಂಚಾಕ್ಷರ ಯಜ್ಞ ನಡೆಸಿ ಅಭಿಯಾನ ಸಂಪನ್ನಗೊಳಿಸುವುದು. ಈ ಅಭಿಯಾನಕ್ಕೆ ನಾಡಿನ ಸಾಧು, ಸಂತರು, ಭಜನಾ ಮಂದಿರಗಳು, ಪಾರಾಯಣ ಮಂಡಳಿಗಳು,ವಿವಿಧ ಜಾತಿ ಸಂಘಟನೆಗಳು,ಹಿಂದೂ ಸಂಘಟನೆಗಳು ಸಹಭಾಗಿಗಳಾಗಬೇಕು ಎಲ್ಲ ಮಠಾಧೀಶರು ಶಿಷ್ಯರ, ಅಭಿಮಾನಿಗಳ, ಭಕ್ತರಿಗೆ ಕರೆಕೊಡಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ.