ಉಡುಪಿ: ಕಾಪು ಬೀಚ್ ಬಳಿ ಬೈಕ್, ಮೊಬೈಲ್, ಪರ್ಸ್ ಇಟ್ಟು ನಾಪತ್ತೆಯಾದ ಯುವಕನ ಮೃತದೇಹ ಕಡೆಕಾರು- ಪಡುಕೆರೆ ಬಳಿಯ ಸಮುದ್ರದಲ್ಲಿ ಶುಕ್ರವಾರ ಸಂಜೆ ವೇಳೆ ಪತ್ತೆಯಾಗಿದೆ.
ಮೃತ ಯುವಕನನ್ನು ಕಾಪು ಪಡುಗ್ರಾಮದ ಕರಣ್ ಸಾಲ್ಯಾನ್ (20) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆಯಿಂದ ಮನೆಯಿಂದ ನಾಪತ್ತೆ ಆಗಿದ್ದ ಕರಣ್ ಸಾಲ್ಯಾನ್ ಅವರ ಬೈಕು, ಮೊಬೈಲ್ ಹಾಗೂ ಪರ್ಸ್ ಕಾಪು ಲೈಟ್ ಹೌಸ್ ಬಳಿಯ ಶ್ರೀಯಾನ್ ಸದನ ಮನೆಯ ಬಳಿ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿತ್ತು. ಕಾಣೆಯಾದ ಬಗ್ಗೆ ತಂದೆ ತುಳಸಿ ಸಾಲ್ಯಾನ್‌ರವರು ಕಾಪು ಠಾಣೆಗೆ ನಾಪತ್ತೆ ದೂರು ಸಲ್ಲಿಸಿದ್ದರು.
ಕಾಣೆಯಾದ ಬೆನ್ನಲ್ಲೇ ಸ್ಥಳೀಯರು, ಈಜುಗಾರರು ಶುಕ್ರವಾರ ಬೆಳಗಿನಿಂದಲೇ ಕಾಪು ಸುತ್ತಮುತ್ತಲಿನ ಸಮುದ್ರದಲ್ಲಿ ಹುಡುಕಾಟ ನಡೆಸಿದ್ದು, ಸಂಜೆಯ ವೇಳೆ ಮಲ್ಪೆ ಬಳಿಯ ಪಡುಕೆರೆ ಕಡೆಕಾರು ಸಮುದ್ರದಲ್ಲಿ ಮೃತದೇಹ ತೇಲುತ್ತಿರುವ ಬಗ್ಗೆ ಮಾಹಿತಿ ದೊರಕಿದೆ. ಸ್ಥಳೀಯರು ಮೃತದೇಹವನ್ನು ಸಮುದ್ರದಿಂದ ಹೊರತೆಗೆದಿದ್ದಾರೆ.
ಕಾಪುವಿನ ಸಮಾಜಸೇವಕ ಸೂರಿ ಶೆಟ್ಟಿಯವರು ಮೃತದೇಹವನ್ನು ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕರಣ್ ಕುಟುಂಬಿಕರು ಘಟನಾ ಸ್ಥಳಕ್ಕೆ ತೆರಳಿ ಮೃತದೇಹದ ಗುರುತು ಪತ್ತೆ ಮಾಡಿದ್ದಾರೆ. ಈ ವೇಳೆ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.