ಉಡುಪಿ: ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಜ.19ರಂದು ರಾತ್ರಿ 11ಗಂಟೆ ಸುಮಾರಿಗೆ ಬಸ್ ಸಿಬ್ಬಂದಿ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಚೂರಿ ಇರಿತ ನಡೆದು ಮೂವರು ಗಾಯಗೊಂಡಿದ್ದಾರೆ.
ಸಿಟಿ ಬಸ್ ಚಾಲಕರಾದ ನಿಟ್ಟೂರಿನ ರಾಜೀವನಗರದ ಸಂತೋಷ್ ಕುಮಾರ್ (30) ಹಾಗೂ ತೊಟ್ಟಂ ಬಡಾನಿಡಿಯೂರಿನ ಶಿಶಿರ್ ಪಾಲನ್(31) ಸ್ಕೂಟರ್ ನಲ್ಲಿ ಕೆಲಸ ಮುಗಿಸಿ ಮನೆ ಕಡೆ ಹೋಗುತ್ತಿದ್ದಾಗ ಉಡುಪಿಯ ಬನ್ನಂಜೆ ಬಳಿ ರಿಕ್ಷಾದಲ್ಲಿ ಬಂದ ಸುದೀಪ್, ಬುರ್ಹಾನ್, ಶಾರುಕ್ ಮತ್ತು ತನ್ವೀರ್ ಅಡ್ಡಗಟ್ಟಿ ಎಂಬವರು ಸಂತೋಷ್ ಹಾಗೂ ಶಿಶಿರ್ ಗೆ ಚೂರಿ ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪರ್ಯಾಯದಿನದಂದು ಟಿಎಂಟಿ ಮತ್ತು ಜೆಎಂಟಿ ಬಸ್ಸಿನ ಮಧ್ಯೆ ಟೈಮಿಂಗ್ ವಿಚಾರಕ್ಕೆ ಜಗಳ ನಡೆದಿತ್ತು. ಈ ಬಗ್ಗೆ ದೂರು ಕೊಟ್ಟಿದ್ದಕ್ಕೆ ದ್ವೇಷಗೊಂಡು ಆರೋಪಿಗಳು ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಸಂತೋಷ್ ಕುಮಾರ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧಿಸಿ ಸಿಟಿ ಬಸ್ ಚಾಲಕರಾದ ಮಲ್ಪೆ ಬಲರಾಮ ನಗರದ ಮುಹಮ್ಮದ್ ಬುರ್ಹಾನ್(29) ಪ್ರತಿದೂರು ದಾಖಲಿಸಿದ್ದಾರೆ. ಅದರಂತೆ ಬರ್ಹಾನ್ ಅವರು ಆಟೋ ರಿಕ್ಷಾದಲ್ಲಿ ಸತೀಶ ಮತ್ತು ಸುದೀಪ್ ಎಂಬವರೊಂದಿಗೆ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಅಂಗಡಿಯ ಬಳಿ ಹೋಗುತ್ತಿದ್ದಾಗ 4-5 ಬೈಕ್ ಗಳಲ್ಲಿ ಬಂದ ಶಿಶಿರ್, ಗಣೇಶ್, ವಿಖ್ಯಾತ್, ಸಂತು, ಚೇತು, ಶರತ್, ಇತರರು, ರಿಕ್ಷಾವನ್ನು ಅಡ್ಡಗಟ್ಟಿ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ಚೂರಿ ಹಾಗೂ ಬಿಯರ್ ಬಾಟಲಿಯಿಂದ ಇರಿದು ಗಾಯಗೊಳಿಸಿ ಕೊಲೆಗೆ ಯತ್ನಿಸಿದ್ದಾರೆಂದು ದೂರಲಾಗಿದೆ.
ಉಡುಪಿಯ ಪರ್ಯಾಯ ನಿಮಿತ್ತ ಸಿಟಿ ಬಸ್ ನಿಲ್ದಾಣದಲ್ಲಿ ಟಿಎಂಟಿ ಮತ್ತು ಜೆಎಂಟಿ ಬಸ್ ಗಳ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆದಿದ್ದು, ಈ ಬಗ್ಗೆ ಸುದೀಪ್ ದೂರು ನೀಡಿದ ದ್ವೇಷದಲ್ಲಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆಂದು ಬುರ್ಹಾನ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.