ಉಡುಪಿ: ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆಯ ಮುಖಂಡನೋರ್ವನನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ.
ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ್ ಸೂಡ ಬಂಧಿತ ಆರೋಪಿ. ಈತ ದಕ್ಷಿಣ ಕನ್ನಡ ಮರಾಠೆ ಸಂರಕ್ಷಣಾ ಸಮಿತಿಯ ವಾಟ್ಸಾಪ್ ಗುಂಪಿನಲ್ಲಿ ಹಾಕಿದ ವಾಯ್ಸ್ ಮಸೇಜ್‌ನಲ್ಲಿ ಅಂಬೇಡ್ಕರ್ ಹಾಗೂ ದಲಿತರಿಗೆ ಅಪಮಾನಕರ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ನ.10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಕರಾವಳಿ ಮರಾಠಿ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೊ ಮುದ್ರಿಸಿರುವುದು ಉಮೇಶ ನಾಯ್ಕ್‌ನ ಕಂಗೆಣ್ಣಿಗೆ ಗುರಿಯಾಗಿತ್ತು. ಇದನ್ನೇ ನೆಪವಾಗಿರಿಸಿಕೊಂಡು ಹಿಂದೂ ಜಾಗರಣ ವೇದಿಕೆಯ ಮುಖಂಡ ಅಂಬೇಡ್ಕರ್ ಹಾಗೂ ದಲಿತರನ್ನು ಅವಮಾನಿಸಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದನು.
ಆರೋಪಿಯನ್ನು ಇಂದು ಕಾರ್ಕಳದಲ್ಲಿ ಬಂಧಿಸಿ ಪೊಲೀಸರು ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.