ವಾರಣಾಸಿ: ಅತ್ಯಾಚಾರ ಪ್ರಕರಣ ಸಂಬಂಧಿಸಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಮ್‌ದುಲಾರ್ ಗೊಂಡ್ ಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 25 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಬಾಲಕಿ ಬಹಿರ್ದೆಸೆಗೆಂದು ನವೆಂಬರ್ 4, 2014ರಂದು ಸಂಜೆ ಹೊತ್ತು ಹತ್ತಿರದ ಗದ್ದೆಗೆ ತೆರಳಿದಂತಹ ಸಂದರ್ಭದಲ್ಲಿ ಗೊಂಡ್ ಆಕೆಯನ್ನು ಹಿಡಿದು ಲೈಂಗಿಕ ದೌರ್ಜನ್ಯವೆಸಗಿದ್ದನೆಂದು ದೂರಲಾಗಿತ್ತು. ಬಾಲಕಿ ಅವರಿಂದ ತಪ್ಪಿಸಿಕೊಂಡು ಮನೆಗೆ ತೆರಳಿ ರೈತನಾಗಿರುವ ತನ್ನ ಅಣ್ಣನ ಬಳಿ ನಡೆದ ವಿಷಯ ತಿಳಿಸಿ ಕಳೆದೊಂದು ವರ್ಷದಿಂಧ ಗೊಂಡ್ ತನಗೆ ಬೆದರಿಸಿ ಅತ್ಯಾಚಾರವೆಸಗಿದ್ದಾರೆಂದು ದೂರಿದ್ದಳು. ನಂತರ ಪೊಲೀಸ್ ದೂರು ದಾಖಲಿಸಿಕೊಂಡಿದ್ದರು.
ಡಿಸೆಂಬರ್ 12ರಂದು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿತ್ತು. ಪೋಕ್ಸೋ ಕಾಯಿದೆ ಹಾಗೂ ಐಪಿಸಿಯ ಸೆಕ್ಷನ್ 376 ಹಾಗೂ 506 ಅನ್ವಯ ಅಪರಾಧಿಯಾಗಿರುವ ಗೊಂಡ್ ಅವರನ್ನು ತಕ್ಷಣ ಬಂಧಿಸಲಾಗಿತ್ತು.
ಸುಪ್ರೀಂ ಕೋರ್ಟಿನ 2013 ನಿಯಮದ ಪ್ರಕಾರ ಗೊಂಡ್ ಅವರು ತಮ್ಮ ವಿಧಾನಸಭಾ ಸದಸ್ಯತ್ವ ಕಳೆದುಕೊಳ್ಳುವ ಎಲ್ಲಾ ಸಾಧ್ಯತೆಯಿದೆ. ಯಾವುದೇ ಅಪರಾಧ ಪ್ರಕರಣದಲ್ಲಿ ಕನಿಷ್ಠ 2 ವರ್ಷ ಜೈಲು ಶಿಕ್ಷೆ ವಿಧಿಸಲ್ಪಟ್ಟ ಶಾಸಕ ಅಥವಾ ಸಂಸದ ತಮ್ಮ ಸದಸ್ಯತ್ವ ಕಳೆದುಕೊಳ್ಳುತ್ತಾರೆಂದು ಸುಪ್ರೀಂ ಕೋರ್ಟ್ ತೀರ್ಪು ಹೇಳಿತ್ತು.
ಗೊಂಡ್ ಅವರು ಸೋನಭದ್ರಾ ಜಿಲ್ಲೆಯ ದುದ್ದಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.