Saturday, September 26, 2026

ಸಾಮಾಜಿಕ ಜಾಲತಾಣ: ಒಳಿತಿನ ಜತೆಗೆ ಕೆಡುಕೂ ಹೆಚ್ಚುತ್ತಿದೆ: ಗುಜ್ಜಾಡಿ ರಾಮದಾಸ್ ನಾಯಕ್

Must read

ಉಡುಪಿ: ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಒಳಿತಿನ ಜತೆಗೆ ಕೆಡುಕೂ ಹೆಚ್ಚಾಗುತ್ತಿದ್ದು, ಸಮುದಾಯಗಳ ನಡುವಿನ ಬಾಂಧವ್ಯವೂ ಹದಗೆಡುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಎಲ್ಲರೂ ಜಾಗೃತರಾಗಬೇಕು ಎಂದು ಸ್ವರ್ಣ ಜುವೆಲ್ಲರ್ಸ್‌ನ ನಿರ್ದೇಶಕ ಗುಜ್ಜಾಡಿ ರಾಮದಾಸ್ ನಾಯಕ್ ಹೇಳಿದರು.
ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೊರಾಂಗಣದ ಗುಜ್ಜಾಡಿ ನರಸಿಂಹ ನಾಯಕ್ ವೇದಿಕೆಯಲ್ಲಿ ಉಡುಪಿ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಆಚರಣೆ ಹಾಗೂ ವಜ್ರ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಭಾರತದಲ್ಲಿ ಜನಿಸಿರುವ ನಾವೆಲ್ಲರೂ ಅದೃಷ್ಟವಂತರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹಿಂದೂ ಧರ್ಮದ ಪುನರುತ್ಥಾನವಾಗುತ್ತಿದ್ದು, ಭಾರತ ವಿಶ್ವಗುರುವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.
ಸಮಿತಿಯ ಗೌರವ ಸಲಹೆಗಾರ ಹಾಗೂ ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ‘60 ವರ್ಷಗಳ ಹಿಂದೆ ಹಿರಿಯರು ಆರಂಭಿಸಿದ ಗಣೇಶೋತ್ಸವದಲ್ಲಿ ಅಂದು ಇದ್ದ ಭಕ್ತಿಭಾವ ಇಂದಿಗೂ ಮುಂದುವರಿದಿರುವುದು ವಿಶೇಷ. ಗಣೇಶೋತ್ಸವವು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ’ ಎಂದರು.
ಉದ್ಯಮಿಗಳಾದ ಸಾಧು ಸಾಲಿಯಾನ್, ಮಲ್ಪೆಯ ಭಾಸ್ಕರ್ ಶೇರಿಗಾರ್ ಹಾಗೂ ವಜ್ರ ಮಹೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು.

ಕೋಡಿಕಲ್ ತಂಡಕ್ಕೆ ಪ್ರಥಮ
ವಜ್ರ ಮಹೋತ್ಸವದ ಅಂಗವಾಗಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯಲ್ಲಿ ಕೋಡಿಕಲ್‌ನ ಶ್ರೀರಾಮ ಮುಖ್ಯಪ್ರಾಣ ಕುಣಿತ ಭಜನಾ ತಂಡ ಪ್ರಥಮ ಸ್ಥಾನ ಪಡೆಯಿತು. ಸುರತ್ಕಲ್ ಹೊಸಬೆಟ್ಟಿನ ಶ್ರೀ ಬಾಲವಿಕಾಸ ಭಜನಾ ಮಂಡಳಿ ದ್ವಿತೀಯ ಹಾಗೂ ಕಾರ್ಕಳ ನೀರೇಬೈಲೂರಿನ ಶ್ರೀದೇವಿ ಭಜನಾ ಮಂಡಳಿ ತೃತೀಯ ಸ್ಥಾನ ಗಳಿಸಿತು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಖ್ಯಾತಿ ಭಟ್ ವಂದೇ ಮಾತರಂ ಗೀತೆ ಹಾಡಿದರು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ. ವಸಂತ್ ಭಟ್ ಸ್ವಾಗತಿಸಿದರು. ವಜ್ರ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಹಾಗೂ ಸರಿತಾ ಕಾರ್ಯಕ್ರಮ ನಿರ್ವಹಿಸಿದರು.
ಸಭೆಗೂ ಮುನ್ನ ಭರತಾಂಜಲಿ ಕಡಿಯಾಳಿ ತಂಡದಿಂದ ಲಘು ಸಂಗೀತ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ತೆಂಕು ಮತ್ತು ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನಗೊಂಡಿತು. ರಾತ್ರಿ 8.30ಕ್ಕೆ ಗಣಪನ ಸನ್ನಿಧಿಯಲ್ಲಿ ರಂಗಪೂಜೆ ನೆರವೇರಿತು.

spot_img

More articles

LEAVE A REPLY

Please enter your comment!
Please enter your name here