Sunday, September 13, 2026

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ: ಸೆ.14ರಿಂದ 20ರವರೆಗೆ 60ನೇ ಶ್ರೀಗಣೇಶೋತ್ಸವ ಸಂಭ್ರಮ

Must read

ಉಡುಪಿ: ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ (ಕಡಿಯಾಳಿ) ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಮಂಟಪದಲ್ಲಿ ಸೆ.14ರಿಂದ 20ರವರೆಗೆ 60ನೇ ಶ್ರೀಗಣೇಶೋತ್ಸವ (ವಜ್ರ ಮಹೋತ್ಸವ) ನಡೆಯಲಿದೆ ಎಂದು ಸಮಿತಿ ಗೌರವಾಧ್ಯಕ್ಷ ಹಾಗೂ ಶಾಸಕ ಯಶಪಾಲ್ ಎ. ಸುವರ್ಣ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.13ರಂದು ಸಂಜೆ 4.30ಕ್ಕೆ ಜೋಡುಕಟ್ಟೆಯಿಂದ ಗಣಪತಿ ವಿಗ್ರಹದ ಮೆರವಣಿಗೆ ನಡೆಯಲಿದ್ದು, ಡಾ. ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಶಿಕಿರಣ್ ಉಮಾಕಾಂತ್ ಚಾಲನೆ ನೀಡಲಿದ್ದಾರೆ ಎಂದರು.
ವಜ್ರ ಮಹೋತ್ಸವದ ಅಂಗವಾಗಿ ಭವ್ಯ ‘ರಾಜ ದರ್ಬಾರ್’ ವೇದಿಕೆ ನಿರ್ಮಿಸಲಾಗುತ್ತಿದೆ. ಇಲ್ಲಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಏಳು ದಿನಗಳ ಕಾಲ ರಾಜನಂತೆ ವಿರಾಜಮಾನನಾಗಿರುವ ಗಣಪತಿ ಭಕ್ತರಿಗೆ ಅನುಗ್ರಹ ನೀಡಲಿದ್ದಾನೆ. ಭವಿಷ್ಯದ ದೃಷ್ಟಿಯಿಂದ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಭಕ್ತಿ ಮತ್ತು ಶ್ರದ್ಧೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದ್ದು, ಉತ್ಸವದಲ್ಲಿ ಸಿನಿಮಾ ಗೀತೆಗಳಿಗೆ ಅವಕಾಶವಿರುವುದಿಲ್ಲ. ಕಡಿಯಾಳಿಯನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ಕಡೆಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿದ್ದು, ಫ್ಲೆಕ್ಸ್, ಬ್ಯಾನರ್, ಕೇಸರಿ ಧ್ವಜ ಹಾಗೂ ಬಟ್ಟೆ ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ ಎಂದರು.
ಸೆ.17ರಂದು ಆಹ್ವಾನಿತ ಕಲಾವಿದರಿಂದ ಕುಣಿತ ಭಜನಾ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಸೆ.19ರಂದು ಉಡುಪಿ ನಗರದ 100ಕ್ಕೂ ಅಧಿಕ ಗಣೇಶೋತ್ಸವ ಸಮಿತಿಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಗುರುತಿಸಿ ಗೌರವಿಸಲಾಗುವುದು. ಸೆ.20ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಚಿನ್ನದ ಕಿರೀಟ, ಪಾಶಾಂಕುಶ ಸೇರಿದಂತೆ ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಗಣಪತಿ ವಿಗ್ರಹವನ್ನು ಇಂದಿರಾನಗರದ ಎಂಜಿನಿಯರ್ ಸಂಪತ್ ರಾವ್ ರಚಿಸಿದ್ದಾರೆ. ಭಕ್ತರ ವಾಹನಗಳಿಗಾಗಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ, ಯು. ಕಮಲಾಬಾಯಿ ಪ್ರೌಢಶಾಲೆ ಹಾಗೂ ಕುಂಜಿಬೆಟ್ಟು ಬಿಜೆಪಿ ಜಿಲ್ಲಾ ಕಚೇರಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯ ಅತಿ ಹಿರಿಯ ಗಣಪತಿ ಸಮಿತಿಗಳಲ್ಲಿ ಒಂದಾಗಿರುವ ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯು 50ನೇ ವರ್ಷದ ಸುವರ್ಣ ಮಹೋತ್ಸವವನ್ನು ಸಾಮಾಜಿಕ ಚಿಂತನೆಯೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಿತ್ತು. ಇದೀಗ ವಜ್ರ ಮಹೋತ್ಸವದ ಅಂಗವಾಗಿಯೂ ಹಲವು ಸಾಮಾಜಿಕ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಯಶಪಾಲ್ ಸುವರ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಪ. ವಸಂತ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಗೀತಾ ಶೇಟ್, ವಜ್ರ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಅಂಚನ್ ಹಾಗೂ ಸತೀಶ್ ಕುಲಾಲ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here