ಉಡುಪಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಅಲ್ ಕಸೀಮ್ ಝೋನ್ ವತಿಯಿಂದ ಆಯೋಜಿಸಿದ್ದ ‘ಲೆಗೆಸಿ ನೈಟ್-2026’ ಫ್ಯಾಮಿಲಿ ಮೀಟ್ ಕಾರ್ಯಕ್ರಮವು ಬುರೈದ ರೆಸಾರ್ಟ್‌ನಲ್ಲಿ ವಿಜೃಂಭಣೆಯಿಂದ ನಡೆಯಿತು.
ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಮಕ್ಕಳ ಕಲಾ ಪ್ರತಿಭೆಗಳ ಅನಾವರಣ, ದಫ್ಫ್, ಕವಾಲಿ, ಇಸ್ಲಾಮಿಕ್ ಪ್ರವಚನ, ಅನ್ನದಾನ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಗಮನ ಸೆಳೆದವು. ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾಮಾಜಿಕ, ಸಾಮುದಾಯಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಮುಖಂಡರನ್ನು ಒಳಗೊಂಡ ಸೌಹಾರ್ದ ಸಂಗಮವೂ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಲೆಗೆಸಿ ನೈಟ್-2026 ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣಂಗಾರ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಸಂಚಾಲಕ ಸಾಲಿಹ್ ಬೆಳ್ಳಾರೆ ಸ್ವಾಗತಿಸಿದರು.

ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಕೆಸಿಎಫ್ ರಿಯಾದ್ ಝೋನ್ ಕೋಶಾಧಿಕಾರಿ ಹಬೀಬುಲ್ಲಾ ತೆಕ್ಕಾರ್ ಅವರು ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವೆ ಹಾಗೂ ಸಾಮುದಾಯಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮುಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ‘ಕೆಸಿಎಫ್ ಅಲ್ ಕಸೀಮ್ ಝೋನ್ ಇನ್‌ಸ್ಪೈರ್ ಅವಾರ್ಡ್-2026’ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಡಾ. ಫಾರೂಕ್ ನಈಮಿ ಉಸ್ತಾದ್ ರಚಿಸಿರುವ ‘ಹಿಜ್ರಾ ಹೆಜ್ಜೆ ಗುರುತುಗಳು’ ಕೃತಿಯ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಅಗಲಿದ ಕೆಸಿಎಫ್ ಕಾರ್ಯಕರ್ತರನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.
ರಿಯಾದ್ ಕೆಸಿಎಫ್ ತಂಡದ ದಫ್ಫ್ ಮತ್ತು ಕವಾಲಿ ಪ್ರದರ್ಶನ ಸಭಿಕರ ಗಮನ ಸೆಳೆಯಿತು. ಕೇರಳದ ಮಲಪ್ಪುರಂ ನಿಲಂಬೂರು ‘ಮಜಮಹ್ ಸಖಾಫತಿ’ ಸಂಸ್ಥೆಯ ಸಾರಥಿ ಶೈಖುನಾ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ಕೆಸಿಎಫ್ ಅಲ್ ಕಸೀಮ್ ಝೋನ್ ಅಧ್ಯಕ್ಷ ಅಬ್ದುಲ್ ಕರೀಮ್ ಇಮ್ದಾದಿ, ಬುರೈದ ಐಸಿಎಫ್ ಹಿರಿಯ ನಾಯಕ ಅಬ್ದುಲ್ ಖಾದರ್ ದಾರಿಮಿ, ಝೋನ್ ಸಂಘಟನಾ ವಿಭಾಗದ ಅಧ್ಯಕ್ಷ ಮುಸ್ತಾಫಾ ಲತೀಫಿ ಮತ್ತಿತರರು ಉಪಸ್ಥಿತರಿದ್ದರು.
ಝೋನ್ ಕಾರ್ಯದರ್ಶಿ ಶಾಹುಲ್ ಹಮೀದ್ ಮಣ್ಣಾಪು ವಂದಿಸಿದರು.

