ಉಡುಪಿ: “ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ–ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ” ಎಂಬ ಧ್ಯೇಯದೊಂದಿಗೆ ಜುಲೈ 31ರಿಂದ ಆಗಸ್ಟ್ 2ರವರೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಸ್ವದೇಶಿ ಖಾದ್ಯ ಮೇಳ ನಡೆಯಲಿದೆ ಎಂದು ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ತಿಳಿಸಿದರು.
ಉಡುಪಿ ಮಥುರಾ ಕಂಫರ್ಟ್ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಉದ್ಯಮಿಗಳು, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಮೇಳವು ಉತ್ತಮ ವೇದಿಕೆಯಾಗಲಿದೆ ಎಂದರು.
ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಮೇಳದಲ್ಲಿ ಸ್ವದೇಶಿ ತಿಂಡಿ–ತಿನಿಸುಗಳು, ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳು, ವಿವಿಧ ಬಗೆಯ ದೋಸೆಗಳು, ಹಲಸಿನ ಹಣ್ಣಿನಿಂದ ತಯಾರಿಸಿದ ವಿಶೇಷ ಆಹಾರ ಪದಾರ್ಥಗಳು, ಮಳೆಗಾಲದ ವಿಶೇಷ ಖಾದ್ಯಗಳು ಹಾಗೂ ಸ್ಥಳದಲ್ಲೇ ತಯಾರಿಸಿ ನೀಡುವ ಲೈವ್ ಫುಡ್‌ಗಳು ಲಭ್ಯವಿರಲಿವೆ ಎಂದು ಹೇಳಿದರು.
ಇದಲ್ಲದೆ, ಸಾವಯವ ಉತ್ಪನ್ನಗಳು, ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು ಸೇರಿದಂತೆ ವಿವಿಧ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ ಎಂದು ತಿಳಿಸಿದರು.
ಮೂರು ದಿನಗಳ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು, ಸ್ಥಳೀಯ ರೈತರಿಗೆ ಉತ್ತೇಜನ ನೀಡುವುದು, ಸಾವಯವ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವುದು ಹಾಗೂ ಆರೋಗ್ಯಕರ ಸ್ವದೇಶಿ ಆಹಾರದ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೃಷಿಕರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ನಗರಸಭೆಯ ಮಾಜಿ ಉಪಾಧ್ಯಕ್ಷೆ ಅಮೃತ ಕೃಷ್ಣಮೂರ್ತಿ, ದಯಾನಂದ ಕಪ್ಪೆಟ್ಟು, ಸುನಿಲ್ ಕುಮಾರ್ ಕಪ್ಪೆಟ್ಟು, ಗುರು ಪ್ರಸಾದ್, ಸಂತೋಷ್, ರವೀಂದ್ರ, ಹರೀಶ್ ಪೂಜಾರಿ, ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಚರಣ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಜು.31ರಿಂದ ಉಡುಪಿಯಲ್ಲಿ “ಸ್ವದೇಶಿ ಖಾದ್ಯ ಮೇಳ”
More articles

