Thursday, June 25, 2026

ಎಂಸಿಸಿ ಬ್ಯಾಂಕ್ ಲಿಮಿಟೆಡ್: ದೇರಳಕಟ್ಟೆ, ಕಟಪಾಡಿಯಲ್ಲಿ ಹೊಸ ಶಾಖೆಗಳ ಉದ್ಘಾಟನೆ

Must read

ಉಡುಪಿ: ಎಂಸಿಸಿ ಬ್ಯಾಂಕಿನ 22ನೇ ಶಾಖೆ ಇದೇ ಜೂನ್ 28ರಂದು ದೇರಳಕಟ್ಟೆಯಲ್ಲಿ ಹಾಗೂ ಆಗಸ್ಟ್ 2ರಂದು 23ನೇ ಶಾಖೆ ಉಡುಪಿಯ ಕಟಪಾಡಿಯಲ್ಲಿ ಉದ್ಘಾಟನೆಯಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇರಳಕಟ್ಟೆ ಶಾಖೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬ್ಯಾಂಕಿನ 16ನೇ ಎಟಿಎಂ ಕೂಡ ಕಾರ್ಯಾರಂಭ ಮಾಡಲಿದೆ. ಇದಲ್ಲದೆ, ಮೊರ್ಗನ್ಸ್ ಗೇಟ್ ಶಾಖೆಯನ್ನು ಜುಲೈ 25ರಂದು, ಮೂಡಬಿದಿರೆ ಶಾಖೆಯನ್ನು ಆಗಸ್ಟ್ 22ರಂದು ಸ್ಥಳಾಂತರಗೊಳಿಸಲಿದ್ದು, ಕಾರ್ಕಳ ಶಾಖೆಯನ್ನು ಆಗಸ್ಟ್ 26ರಂದು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವ ಯೋಜನೆಯೂ ಇದೆ ಎಂದು ಹೇಳಿದರು.
1,535 ಕೋಟಿ ರೂ. ವ್ಯವಹಾರ: 
114 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಹಣಕಾಸು ವರ್ಷದಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ವ್ಯವಹಾರ ವಹಿವಾಟು 22.89 ಶೇಕಡಾ ಏರಿಕೆಯೊಂದಿಗೆ 1,535 ಕೋಟಿ ರೂ. ಮೈಲಿಗಲ್ಲು ತಲುಪಿದೆ ಎಂದು ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ.
ಬ್ಯಾಂಕಿನ ನಿವ್ವಳ ಮೌಲ್ಯ 83.76 ಕೋಟಿ ರೂ.ಗಳಿಂದ 91.80 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಎನ್‌ ಆರ್‌ ಐ ಗ್ರಾಹಕರ ಬೆಂಬಲ ಬ್ಯಾಂಕಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. 2018ರಲ್ಲಿ ಪ್ರಸ್ತುತ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಬ್ಯಾಂಕ್ ವೇಗದ ಬೆಳವಣಿಗೆ ಸಾಧಿಸಿದೆ. ಠೇವಣಿಗಳು 304 ಕೋಟಿ ರೂ.ಗಳಿಂದ 876 ಕೋಟಿ ರೂ.ಗಳಿಗೆ, ಸಾಲ ಮತ್ತು ಮುಂಗಡಗಳು 191 ಕೋಟಿ ರೂ.ಗಳಿಂದ 657 ಕೋಟಿ ರೂ.ಗಳಿಗೆ ಹಾಗೂ ಷೇರು ಬಂಡವಾಳ 13 ಕೋಟಿ ರೂ.ಗಳಿಂದ 34 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಒಟ್ಟು ವ್ಯವಹಾರ ವಹಿವಾಟು 496 ಕೋಟಿ ರೂ.ಗಳಿಂದ 1,535 ಕೋಟಿ ರೂ.ಗಳಿಗೆ ತಲುಪಿದ್ದು, 209 ಶೇಕಡಾ ಬೆಳವಣಿಗೆ ದಾಖಲಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕ ಆ್ಯಂಡ್ ಡಿಸೋಜಾ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here