Sunday, June 21, 2026

ತೊಟ್ಟಂ ವಿಶ್ರಾಮ್ ಹೋಮ್ ಸ್ಟೇ ಮೇಲೆ ದಾಳಿ: ಎಂಡಿಎಂಎ, ಗಾಂಜಾ ವಶ; ಹೋಮ್ ಸ್ಟೇ ಮಾಲೀಕ ಸಹಿತ 7 ಮಂದಿಯ ಬಂಧನ

Must read

ಉಡುಪಿ: ಉಡುಪಿ ತಾಲೂಕಿನ ತೆಂಕನಿಡಿಯೂರು ಗ್ರಾಮದ ತೊಟ್ಟಂ ಚರ್ಚ್ ಸಮೀಪದ ವಿಶ್ರಾಮ್ ಹೋಮ್ ಸ್ಟೇ ಮೇಲೆ ಮಲ್ಪೆ ಪೊಲೀಸರು ದಾಳಿ ನಡೆಸಿ ಎಂಡಿಎಂಎ, ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಏಳು ಮಂದಿಯನ್ನು ಬಂಧಿಸಿದ್ದಾರೆ.
ಹೋಂ ಸ್ಟೇಯಲ್ಲಿ ಮಾದಕ ವಸ್ತುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪಾಧೀಕ್ಷಕರು (ಉಡುಪಿ ಉಪವಿಭಾಗ) ಹಾಗೂ ಮಲ್ಪೆ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಅನೀಲ್ ಕುಮಾರ್ ಡಿ., ಪಿಎಸ್‌ಐ ಗಂಗಪ್ಪ ಎಸ್. ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು.
ದಾಳಿಯ ವೇಳೆ ಹೋಂ ಸ್ಟೇಯ ಒಂದು ಕೊಠಡಿಯಲ್ಲಿ ನಾಜೀಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಹಾಗೂ ವಿಘ್ನೇಶ್ ಎಂಬ ನಾಲ್ವರನ್ನು ಪರಿಶೀಲಿಸಿದಾಗ ಅವರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಯಿತು. ಬಳಿಕ ಪಂಚರ ಸಮಕ್ಷಮ ನಡೆಸಿದ ಶೋಧನೆಯಲ್ಲಿ 33.81 ಗ್ರಾಂ ಗಾಂಜಾ, 9.73 ಗ್ರಾಂ ಎಂಡಿಎಂಎ, ಐದು ಮೊಬೈಲ್ ಫೋನ್‌ಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು ₹3,000 ಹಾಗೂ ಎಂಡಿಎಂಎಯ ಮೌಲ್ಯ ₹20,000 ಎಂದು ಅಂದಾಜಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಅನಧಿಕೃತವಾಗಿ ಹೋಂ ಸ್ಟೇ ನಡೆಸದಂತೆ ನೋಟಿಸ್ ನೀಡಲಾಗಿದ್ದರೂ ನಿಯಮ ಉಲ್ಲಂಘಿಸಿ ಹೋಂ ಸ್ಟೇ ನಡೆಸುತ್ತಿದ್ದ ಮಾಲೀಕ ಧನ್ವತ್ ರಿಕ್ವಿತ್ ಹಾಗೂ ಕೆಲಸಗಾರ ಬಸವರಾಜ್ ಅವರು ಮಾದಕ ವಸ್ತುಗಳ ಸೇವನೆಗೆ ಸಹಕಾರ ನೀಡಿರುವ ಆರೋಪದಡಿ ಬಂಧಿತರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೀತಾಂಜಲಿ ಜಿನಾ ಅವರನ್ನು ಕೂಡ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here