ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಕ್ಕೆ ಸೈಡ್ ನೀಡುವ ವಿಚಾರವಾಗಿ ಮಂಗಳವಾರ ರಾತ್ರಿ ಹೊರರಾಜ್ಯದ ಪ್ರವಾಸಿಗರು ಹಾಗೂ ಸ್ಥಳೀಯ ವ್ಯಕ್ತಿಯ ನಡುವೆ ಗಲಾಟೆ ನಡೆದು, ದೂರು ಪ್ರತಿದೂರು ದಾಖಲಾಗಿದೆ.
ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಅವರು ಕಾರು ಚಲಾಯಿಸುತ್ತಿದ್ದ ವೇಳೆ ಹೈದರಾಬಾದ್ ಮೂಲದ ಪ್ರವಾಸಿಗರೊಂದಿಗೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಕಾರು ಹತ್ತಿಸಲು ಯತ್ನಿಸಿದ್ದಾರೆ ಎಂದು ಪ್ರವಾಸಿಗರು ದೂರಿದ್ದಾರೆ. ಬಳಿಕ ವಾಗ್ವಾದ ತೀವ್ರಗೊಂಡು ಹೊಡೆದಾಟಕ್ಕೆ ತಿರುಗಿದೆ.

ಕಾರಿನಲ್ಲಿದ್ದ ಕೋಲಿನಿಂದ ಸುಪ್ರೀತ್ ಅವರು ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಹೈದರಾಬಾದ್ ಮೂಲದ ಪವನ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ, ವಾಹನವನ್ನು ನಿಧಾನವಾಗಿ ಚಲಾಯಿಸುವಂತೆ ಹೇಳಿದ್ದಕ್ಕೆ ಪ್ರವಾಸಿಗರೇ ಗಲಾಟೆ ಆರಂಭಿಸಿದ್ದು, ತನ್ನ ಕಾರಿನ ಗಾಜು ಜಖಂಗೊಳಿಸಿದ್ದಾರೆ ಎಂದು ಸುಪ್ರೀತ್ ಪ್ರತಿದೂರು ನೀಡಿದ್ದಾರೆ. ಅಲ್ಲದೆ, ಪತ್ನಿಯೊಂದಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪ್ರವಾಸಿಗರು ಕುರ್ಚಿ ಹಾಗೂ ಫೋಟೋ ಸ್ಟ್ಯಾಂಡ್‌ನಿಂದ ಹಲ್ಲೆ ನಡೆಸಿದ್ದು, ಇದರಿಂದ ಬಾಯಿಗೆ ಗಾಯವಾಗಿ ರಕ್ತಸ್ರಾವ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಮಹಿಳೆಯರು ಮತ್ತು ಮಕ್ಕಳೊಂದಿಗೆ ಉಡುಪಿಗೆ ಆಗಮಿಸಿದ್ದರು. ಗಲಾಟೆ ತೀವ್ರಗೊಂಡಿದ್ದನ್ನು ಗಮನಿಸಿದ ಸ್ಥಳೀಯರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಘಟನೆಯ ದೃಶ್ಯಾವಳಿಗಳು ಮೊಬೈಲ್ ಫೋನ್‌ನಲ್ಲಿ ಸೆರೆಯಾಗಿದ್ದು, ಅವುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

