ಉಡುಪಿ: ಪೆರ್ಡೂರು ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ಮೇ 3ರಂದು ಸಂಜೆ 4ಗಂಟೆಗೆ ದೇವಸ್ಥಾನದ ಪ್ರಾಂಗಣದಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಾಂತಾರಾಮ ಸೂಡ ಅವರು, ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಬಗ್ಗೆ ಈಗಾಗಲೇ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಜೀರ್ಣೋದ್ಧಾರ ಕಾರ್ಯಗಳನ್ನು ಮಾಡಲು ನಾವು ಕಾರ್ಯೋನ್ಮುಖರಾಗಿದ್ದೇವೆ. ಈ ಜೀರ್ಣೋದ್ಧಾರ ಕಾರ್ಯದಲ್ಲಿ ಗ್ರಾಮಸ್ಥರು, ಊರ ಪರವೂರಿನ ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಯಾವುದೇ ರಾಜಕೀಯ, ಧರ್ಮ, ಜಾತಿಗೆ ಸಿಮೀತವಾಗದೆ ಎಲ್ಲ ಜನರ ಆಶೀರ್ವಾದದೊಂದಿಗೆ ಅತ್ಯಂತ ಶೀಘ್ರದಲ್ಲಿ ದೇಗುಲದ ಜೀರ್ಣೋದ್ಧಾರ ಕಾರ್ಯ ನೆರವೇರಬೇಕೆಂಬುವುದು ನಮ್ಮೆಲ್ಲರ ಆಶಯವಾಗಿದೆ ಎಂದರು.
ಈ ಕಾರ್ಯವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ತಂತ್ರಿಗಳು, ಅರ್ಚಕರು ಈಗಾಗಲೇ ಸಾಕಷ್ಟು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಸರ್ವರ ಸಲಹೆ ಸೂಚನೆಗಳನ್ನು ಪಡೆಯುವ ನಿಟ್ಟಿನಲ್ಲಿ ಮೇ 3ರಂದು ದೇವಸ್ಥಾನದ ಪ್ರಾಂಗಣದಲ್ಲಿ ಸಮಾಲೋಚನೆ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಸಮಸ್ತ ಗ್ರಾಮಸ್ಥರು, ಊರು ಹಾಗೂ ಪರವೂರಿನ ಭಕ್ತಾಧಿಗಳು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅವರು ವಿನಂತಿ ಮಾಡಿದ್ದಾರೆ.
ದೇಗುಲದ ತಂತ್ರಿ ವಿದ್ವಾನ್ ಕೆ.ಪಿ. ಕುಮಾರ ಗುರು ಮಾತನಾಡಿ, ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ
ಅತ್ಯಂತ ಪ್ರಾಚೀನವಾದ ದೇಗುಲವಾಗಿದ್ದು, ಇದರ ಜೀರ್ಣೋದ್ಧಾರ ಕಾರ್ಯವು ನಮಗೆಲ್ಲರಿಗೂ ಯೋಗವಾಗಿದೆ. ಹೀಗಾಗಿ ಈ ಸಾರ್ವಜನಿಕ ಸಭೆಯಲ್ಲಿ ಎಲ್ಲರೂ ಭಾಗವಹಿಸಿ, ಸಲಹೆ ಸೂಚನೆಗಳನ್ನು ನೀಡೋಣ ಎಂದು ಹಾರೈಸಿದರು.


