Home ಕರಾವಳಿ ಬ್ರಹ್ಮಾವರ: ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಾಂತರ ರೂ. ವಂಚನೆ: ಶಾಖಾ ವ್ಯವಸ್ಥಾಪಕ ಸಹಿತ ಇಬ್ಬರ...

ಬ್ರಹ್ಮಾವರ: ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಕೋಟ್ಯಾಂತರ ರೂ. ವಂಚನೆ: ಶಾಖಾ ವ್ಯವಸ್ಥಾಪಕ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ಉಡುಪಿ: ಸಾಯಿಬ್ರಕಟ್ಟೆಯಲ್ಲಿರುವ ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯಲ್ಲಿ ಕೋಟ್ಯಾಂತರ ರೂ. ವಂಚನೆ ಪ್ರಕರಣ ನಡೆದಿದ್ದು, ಶಾಖಾ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಸೇರಿ ಸಂಘಕ್ಕೆ ಕೋಟ್ಯಾಂತರ ರೂ. ವಂಚನೆ ಎಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶಿರಿಯಾರ ಸೇವಾ ಸಹಕಾರಿ ಸಂಘದ ಕಾವಡಿ ಶಾಖೆಯ ಪ್ರಭಾರ ಮ್ಯಾನೇಜರ್ ಸುರೇಶ್ ಭಟ್ ಹಾಗೂ ಕಿರಿಯ ಗುಮಾಸ್ತ ಹರೀಶ್ ಕುಲಾಲ್ ಎಂಬಾತನನ್ನು ನ.5ರಂದು ಸಂಘದ ಆಡಳಿತ ಮಂಡಳಿ ತೀರ್ಮಾನದಂತೆ ಬೇರೆ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ಕಾವಡಿ ಶಾಖೆಗೆ ಮ್ಯಾನೇಜರ್ ಆಗಿ ವರ್ಗಾವಣೆಗೊಂಡು ಬಂದ ರಾಮ, ಹಿಂದಿನ ಮ್ಯಾನೇಜರ್ ಸುರೇಶ್ ಭಟ್ ಅವರಿಂದ ಅಧಿಕಾರ ವಹಿಸಿಕೊಳ್ಳುವ ವೇಳೆ ಕಾವಡಿ ಶಾಖೆಯಲ್ಲಿ ಸಂಗ್ರಹವಾದ ಸುಮಾರು 1.70 ಕೋಟಿ ರೂ. ವ್ಯತ್ಯಾಸ ಕಂಡುಬಂದಿತ್ತು. ಅದರಂತೆ ರಾಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕಚೇರಿ ಸಿಬ್ಬಂದಿ ಜೊತೆ ತೆರಳಿ ಪರಿಶೀಲಿಸಿದ್ದು, ಈ ಸಂದರ್ಭ 1.70 ಕೋಟಿ ರೂ. ವಂಚಿಸಿರುವುದು ತಿಳಿದುಬಂದಿದೆ.
ಅಲ್ಲದೇ ಹರೀಶ್ ಕುಲಾಲ್ ಈ ಹಿಂದೆ ಕಾವಡಿ ಶಾಖೆಯಲ್ಲಿ ಆತನ ಚಿನ್ನಾಭರಣ ಅಡವಿಟ್ಟು 21 ಲಕ್ಷ ರೂ. ಪಡೆದಿದ್ದು, ಅದನ್ನು ಪರಿಶೀಲಿಸಿದಾಗ ಹರೀಶ್ ಕುಲಾಲ್, ಅಡವಿಟ್ಟ ಚಿನ್ನಾಭರಣ ಇಲ್ಲದೇ ಇರುವುದು ಬೆಳಕಿಗೆ ಬಂತು. ಇವರಿಬ್ಬರು ಸಂಘಟಿತವಾಗಿ ಸೇರಿಕೊಂಡು ಶಿರಿಯಾರ ಸೇವಾ ಸಹಕಾರಿ ಸಂಘಕ್ಕೆ ಮೋಸ ಮಾಡಿ ವಂಚಿಸುವ ಸಲುವಾಗಿ ದ್ರೋಹ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Exit mobile version