ಉಡುಪಿ: ಕಾಪು ತಾಲೂಕಿನ ಕಳತ್ತೂರು ಗ್ರಾ.ಪಂ ವ್ಯಾಪ್ತಿಯ ಪಡುಕಳತ್ತೂರಿನ ಶ್ರೀ ಅಯ್ಯಣ್ಣ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಸುರತ್ಕಲ್ ಮುಕ್ಕ ಶ್ರೀನಿವಾಸ್ ಆಸ್ಪತ್ರೆ, ಶಿರ್ವದ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ 2025 ರ ಜ.5 ರಂದು ನಡೆಯುವ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಕರಪತ್ರವನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಬುಧವಾರ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀನಿವಾಸ್ ಆಸ್ಪತ್ರೆಯು ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಈ ಆಸ್ಪತ್ರೆಯ ವೈದ್ಯರು ನಮ್ಮ ಊರಿಗೆ ಬಂದು ಆರೋಗ್ಯ ಶಿಬಿರವನ್ನು ನಡೆಸಿಕೊಡುವುದು ನಮ್ಮೆಲ್ಲರಿಗೂ ಸಂತಸ ನೀಡಿದೆ. ಈ ಶಿಬಿರದ ಪ್ರಯೋಜವನ್ನು ಎಲ್ಲರೂ ಪಡೆಯಿರಿ ಎಂದವರು ನುಡಿದರು.
ಶ್ರೀನಿವಾಸ್ ಆಸ್ಪತ್ರೆಯ ವೈದ್ಯ ಡಾ.ಶಶಿರಾಜ್ ಶೆಟ್ಟಿ ಮಾತನಾಡಿ, ಆರೋಗ್ಯ ಶಿಬಿರಗಳು ಪ್ರಚಾರಕ್ಕಲ್ಲ. ಶ್ರೀನಿವಾಸ್ ಆಸ್ಪತ್ರೆಯ ಮೊದಲ ಆದ್ಯತೆ ಜನಸೇವೆಯಾಗಿದೆ. ಅನೇಕ ದೊಡ್ಡ ಆಸ್ಪತ್ರೆಯಲ್ಲಿ ಆಯುಷ್ಮಾನ್ ಬೆಡ್ ಕೊಡುವುದಿಲ್ಲ. ಆದರೆ ನಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಸೇವೆಯ ಜೊತೆಗೆ ಸರಕಾರಿ ಆಸ್ಪತ್ರೆಗಿಂತಲೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ವೈದ್ಯರ ಶುಲ್ಕವನ್ನು ವಿಧಿಸುತ್ತಿಲ್ಲ. ಅಪಘಾತದಲ್ಲಿ ಗಾಯಾಳುವಾದವರಿಗೆ ಯಾರು ಇಲ್ಲದಿದ್ದರೂ, ಮೊದಲ 48 ಗಂಟೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ವೈದ್ಯರಾದ ಡಾ.ಶಶಾಂಕ್, ಡಾ.ರಿಷಬ್
ಕಾಪು ಪುರಸಭೆ ಸದಸ್ಯ ಕಿರಣ್ ಆಳ್ವ, ಹಳೆ ವಿದ್ಯಾರ್ಥಿಗಳಾದ ಕಿಶೋರ್ ಕುಮಾರ್ ಗುರ್ಮೆ, ದಿವಾಕರ್.ಡಿ.ಶೆಟ್ಟಿ, ಶಶಿರಾಜ್ ಪೈಯ್ಯಾರು, ಸುದೇಶ್ ಭಂಡಾರಿ, ಹರಿಶ್ಚಂದ್ರ, ರಜಾಕ್, ಶಾಲಾ ಮುಖ್ಯೋಪಾಧ್ಯಾಯಿನಿ ಶಾಂಭವಿ ಆಚಾರ್ಯ, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಪ್ರವೀಣ್ ಕುಮಾರ್ ಗುರ್ಮೆ ಪ್ರಸ್ತಾವಿಕ ಮಾತನಾಡಿದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಶೆಟ್ಟಿ ಪೈಯ್ಯಾರು ಸ್ವಾಗತಿಸಿ, ನಿರೂಪಿಸಿದರು.
ಜ.5 ರಂದು ಬೆಳಗ್ಗೆ 9.30 ರಿಂದ 1.30 ರವರೆಗೆ ಶಾಲೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಯಲಿದೆ. ಶಿಬಿರದಲ್ಲಿ ನುರಿತ ತಜ್ಞರಿಂದ ಚರ್ಮ, ಸ್ತ್ರೀರೋಗ, ಮಕ್ಕಳು, ಕಿವಿ,ಮೂಗು, ಗಂಟಲು, ಹಲ್ಲು, ಹೃದಯ, ಕಣ್ಣು, ಎಲುಬು, ಕೀಳು, ಶಸ್ತ್ರ ಚಿಕಿತ್ಸಾ ವಿಭಾಗಗಳು ತಪಾಸಣೆಗೆ ಲಭ್ಯ ಇವೆ.
ಶಿಬಿರಕ್ಕೆ ಆಗಮಿಸುವವರಿಗೆ ಉಚಿತ ವಾಹನದ ವ್ಯವಸ್ಥೆಯನ್ನು ಶಾಲಾಡಳಿತ ಮಂಡಳಿ ಮಾಡಿದೆ.