ಉಡುಪಿ: ಸಜ್ಜನರ ರಕ್ಷಣೆಗೆ ಶತ್ರುಗಳ ಸಂಹಾರ ಮಾಡುವುದು ಅಗತ್ಯ. ದೇವಿ ಹೊರಗಿನ ಶಕ್ತಿಗಳನ್ನು ನಾಶ ಮಾಡಿದರೆ ಸಾಕಾಗುವುದಿಲ್ಲ. ನಮ್ಮೊಳಗಿನ ದುಷ್ಟಶಕ್ತಿಗಳನ್ನು ಸದೆಬಡಿಯುವ ಅಗತ್ಯವಿದೆ ಎಂದು ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರು ಹೇಳಿದ್ದಾರೆ.
ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದ ಶತಚಂಡಿಕಾ ಯಾಗ ಹಾಗೂ ಬ್ರಹ್ಮಮಂಡಲ ಸೇವೆಯ ಅಂಗವಾಗಿ ದೇವಳ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇವಿ ಸನ್ನಿಯಲ್ಲಿ ನಡೆಯುವ ಶತಚಂಡಿಕಾ ಯಾಗ, ಧಾರ್ಮಿಕ ಕಾರ್ಯಕ್ರಮಗಳಿಂದ ದೇವರು ಸಂತುಷ್ಠರಾಗಿ ರಾಕ್ಷಸರ ಸಂಹಾರಿಸಿ, ಸಜ್ಜನರ ರಕ್ಷಣೆಗೆ ಮುಂದಾಗುತ್ತಾಳೆ. ನಿರ್ಭೀತಿಯಿಂದ ಧರ್ಮ ಪರಿಪಾಲಿಸುವುದಕ್ಕೆ ಹಾರೈಸುತ್ತಾಳೆ ಎಂದರು.
ಎಂ.ಆರ್.ಜೆ. ಗ್ರೂಪ್ ಬೆಂಗಳೂರು ಆಡಳಿತ ನಿರ್ದೇಶಕ ಡಾ.ಕೆ. ಪ್ರಕಾಶ್ ಶೆಟ್ಟಿ ಮಾತನಾಡಿ, ದೇವರ ದಯೆ ಇಲ್ಲದೇ ಮನುಷ್ಯರು ಈ ಭೂಮಿ ಮೇಲೆ ಅರೆ ಕ್ಷಣವೂ ಬದುಕುವುದಕ್ಕೆ ಸಾಧ್ಯವಿಲ್ಲ. ದೈವಿಶಕ್ತಿ ಇದ್ದಾಗ ಮಾನವರ ಏಳಿಗೆ, ಅಭಿವೃದ್ಧಿ ಕಾಣುವುದಕ್ಕೆ ಸಾಧ್ಯವಿದೆ ಎಂದರು.
ದೇವಳದ ಆಡಳಿತ ಮೊಕ್ತೇಸರ ಮೋಹನ ಮುದ್ದಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಂಬೈಯ ಅದಿತಿ ಇಂಟರ್ ನ್ಯಾಷನಲ್‌ನ ಭರತ್ ಎಂ. ಶೆಟ್ಟಿ, ಎಂ.ಆರ್.ಜೆ. ಗ್ರೂಪ್ ಬೆಂಗಳೂರು ಆಡಳಿತ ನಿರ್ದೇಶಕ ಡಾ.ಕೆ. ಪ್ರಕಾಶ್ ಶೆಟ್ಟಿ, ಮುಂಬೈಯ ಹೇರಂಭಾ ಇಂಡಸ್ಟ್ರಿಸ್ ಆಡಳಿತ ನಿರ್ದೇಶಕ ಕನ್ಯಾನ ಸದಾಶಿವ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ದೇವಳದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಹಿರಿಯ ಭಕ್ತರು ಹಾಗೂ ಪ್ರಮುಖರನ್ನು ಗೌರವಿಸಲಾಯಿತು. ಶಾಸಕರಾದ ಯಶಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು.
ಉಜ್ವಲ್ ಡೆವಲರ‍್ಸ್ನ ಪುರುಷೋತ್ತಮ್ ಶೆಟ್ಟಿ, ಶಿಲಾಶಿಲಾ ತಂತ್ರಿಗಳಾದ ವಿದ್ವಾನ್ ಕೆ.ಎಸ್., ಕೃಷ್ಣಮೂರ್ತಿ ತಂತ್ರಿ, ಕೆ.ಎ. ಶ್ರೀರಮಣ ತಂತ್ರಿ, ಅರ್ಚಕ ವಾಸುದೇವ ಭಟ್, ನಗರಸಭಾ ಸದಸ್ಯ ಶ್ರೀಕೃಷ್ಣರಾವ್ ಕೊಡಂಚ, ಶ್ರೀಮಹಿಷಮರ್ದಿನಿ ದೇವಸ್ಥಾನ ಕಾರ್ಯದರ್ಶಿ ನಾರಾಯಣ ದಾಸ್ ಉಡುಪ, ಪುನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನಾ ಉಪಸ್ಥಿತರಿದ್ದರು.
ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವಾ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ದಾಮೋದರ ಶರ್ಮ ಕರ‍್ಯಕ್ರಮ ನಿರೂಪಿಸಿದರು.